ನಾಗ್ಪುರ್ (ಮಹಾರಾಷ್ಟ್ರ): ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಈ ಸಂಬಂಧ ತನಿಖೆಗೆ ಒತ್ತಾಯಿಸಿರುವ ವ್ಯಕ್ತಿ ಕೇಂದ್ರ ರಸ್ತೆ ಹಾಗೂ ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನಿವಾಸದೆದರುರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ.
ಆದರೆ, ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಆತನನ್ನು ಸರಿಯಾದ ಸಮಯದಲ್ಲಿ ತಡೆದಿದ್ದರಿಂದ ಅನಾಹುತವೊಂದು ತಪ್ಪಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ರಾಣಾ ಪ್ರತಾಪ್ ನಗರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಮೆಹ್ಕರ್ ನಿವಾಸಿ ವಿಜಯ್ ಮರೋತ್ರರಾವ್ ಪವಾರ್ ಎಂಬಾತ ಎರಡು ದಿನಗಳ ಹಿಂದೆ ಶೇಗಾಂವ್-ಖಮಗಾಂವ್ ಪಾಲ್ಖಿ ರಸ್ತೆಯ ಕಳಪೆ ಕಾಮಗಾರಿ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಸಚಿವರಿಗೆ ಪತ್ರ ಬರೆದಿದ್ದರು. ಬೇಡಿಕೆ ಈಡೇರಿಸದಿದ್ದರೆ ಗಡ್ಕರಿ ಮನೆಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ತಿಳಿಸಿದ್ದರು. ಈ ಹಿನ್ನೆಲೆ ಗಡ್ಕರಿ ಮನೆ ಮುಂದೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.
ಆದರೆ, ನಿನ್ನೆ ಸಂಜೆ ಸಚಿವರ ಮನೆ ಮುಂದೆ ಆಗಮಿಸಿದ್ದ ಆತ ಕೀಟನಾಶಕ ಸೇವಿಸಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿ ಆತನನ್ನು ತಡೆದು ಅಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಾನ್ಪುರ ಉದ್ಯಮಿ ಸಾವಿನ ಪ್ರಕರಣ.. ಸಿಬಿಐ ತನಿಖೆಗೆ ಒಪ್ಪಿಸಿದ ಉತ್ತರಪ್ರದೇಶ ಸರ್ಕಾರ