ಮುಂಬೈ:ಮಹಾರಾಷ್ಟ್ರದಲ್ಲಿ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂದೆ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ ಕೆಲವೇ ದಿನಗಳಾಗಿವೆ. ಸಂಪುಟ ರಚನೆ ಕಸರತ್ತು ನಡೆಯುತ್ತಿರುವ ಮಧ್ಯೆಯೇ ಮಂತ್ರಿ ಸ್ಥಾನಕ್ಕಾಗಿ ಶಾಸಕರೊಬ್ಬರಿಗೆ 100 ಕೋಟಿ ರೂಪಾಯಿ ಲಂಚದ ಬೇಡಿಕೆ ಇಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಸಿಎಂ ಏಕನಾಥ್ ಶಿಂದೆ ಸರ್ಕಾರದ ಸಂಪುಟ ಸೇರಲು ಹಲವು ಶಾಸಕರು ರೇಸ್ನಲ್ಲಿದ್ದಾರೆ. ಈ ಅವಕಾಶ ಬಳಸಿಕೊಂಡು ಹಣ ಮಾಡಲು ಮುಂದಾದ ನಾಲ್ವರು ಆರೋಪಿಗಳು ರಾಷ್ಟ್ರೀಯ ಪಕ್ಷದ ಶಾಸಕರೊಬ್ಬರಿಗೆ ಕರೆ ಮಾಡಿ, ನಮಗೆ ರಾಷ್ಟ್ರೀಯ ನಾಯಕ ಪರಿಚಯವಿದೆ. ನಿಮಗೆ ಸಚಿವ ಸ್ಥಾನ ಕೊಡಿಸಲಾಗುವುದು. ಇದಕ್ಕಾಗಿ 100 ಕೋಟಿ ರೂಪಾಯಿ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಆ ಬಳಿಕ ಎರಡು ಮೂರು ಬಾರಿ ಶಾಸಕರೊಂದಿಗೆ ಮಾನಾಡಿದ್ದಲ್ಲದೇ ಜುಲೈ 17 ರಂದು ಆರೋಪಿಗಳು ಒಬೆರಾಯ್ ಹೋಟೆಲ್‌ನಲ್ಲಿ ಶಾಸಕರನ್ನು ಭೇಟಿ ಮಾಡಿದ್ದರು. ಸಚಿವ ಸಂಪುಟದಲ್ಲಿ ಸ್ಥಾನ ಕೊಡಿಸಲು 90 ಕೋಟಿ ರೂ. ಕೇಳುತ್ತಿದ್ದು, ಅದರಲ್ಲಿ ಶೇ.20ರಷ್ಟು ಅಂದರೆ 18 ಕೋಟಿ ರೂ.ಗಳನ್ನು ನಾಳೆ ಕೊಡಬೇಕು ಎಂದು ಶಾಸಕರಿಗೆ ಸೂಚಿಸಿದ್ದರು.