ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಚಲನಚಿತ್ರಗಳು ಅತಿ ಹೆಚ್ಚಾಗಿ ಆನ್ಲೈನ್ ಪ್ಲಾಟ್ ಫಾರಂಗಳಾದ ಒಟಿಟಿ ಮತ್ತು ವೆಬ್ ಚಾನೆಲ್ಗಳನ್ನೇ ನೆಚ್ಚಿಕೊಂಡಿವೆ. ಇದೇ ವಿಷಯವಾಗಿ ಸಂಸತ್ತಿನ ಮೇಲ್ಮನೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ಒಟಿಟಿ ಮತ್ತು ವೆಬ್ ಚಾನೆಲ್ಗಳಿಗೂ ಸೆನ್ಸಾರ್ಶಿಪ್ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.
ರಾಜ್ಯಸಭೆಯಲ್ಲಿ ಬಿಜು ಜನತಾ ದಳದ ಸದಸ್ಯ ಪ್ರಸನ್ನ ಆಚಾರ್ಯ ಈ ವಿಷಯವನ್ನು ಎತ್ತಿದ್ದಾರೆ. ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ ಇದೆ. ಒಟಿಟಿ ಹಾಗೂ ವೆಬ್ ಚಾನೆಲ್ಗಳಿಗೆ ಯಾವ ಸೆನ್ಸಾರ್ ಮಂಡಳಿಯೂ ಅನ್ವಯವಾಗಲ್ಲ. ಹೀಗಾಗಿ ಅಶ್ಲೀಲ ದೃಶ್ಯಗಳು ಮತ್ತು ಧಾರ್ಮಿಕ ದ್ವೇಷ ಭಾವನೆ ಹರಡುವ ವಿಷಯಗಳನ್ನು ತೆಗೆದುಹಾಕಲು ಸೆನ್ಸಾರ್ಶಿಪ್ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.
ಒಟಿಟಿ ನೋಡುಗರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಅದು ಕೋವಿಡ್ ಕಾರಣದಿಂದ ಆಗಿರಬಹುದು ಮತ್ತು ಮನೋರಂಜನೆಗಾಗಿಯೂ ಆಗಿರಬಹುದು, ವೀಕ್ಷಕರು ಅಧಿಕವಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ವೆಬ್ ಚಾನೆಲ್ಗಳಲ್ಲಿ ಅತ್ಯಂತ ಅಶ್ಲೀಲ ಚಿತ್ರಗಳನ್ನು ತೋರಿಸಲಾಗುತ್ತದೆ. ತೀರ ಕೆಟ್ಟ ಭಾಷೆಯನ್ನೂ ಉಪಯೋಗಿಸಲಾಗುತ್ತಿದೆ. ಇದರಿಂದ ತುಂಬಾ ಕೆಟ್ಟ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಯುವ ಜನಾಂಗದ ಮೇಲೆ ಇದರ ದುಷ್ಪರಿಣಾಮವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.