ಹೈದರಾಬಾದ್ :ಕೋವಿಡ್ನಿಂದ ದೇಶ ಚೇತರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಮತ್ತೊಂದು ವೈರಸ್ ಎಂಟ್ರಿ ಕೊಟ್ಟು ಜನರಲ್ಲಿ ಭೀತಿ ಸೃಷ್ಟಿಸಿದೆ. ಜೂನ್ ಮಧ್ಯದ ವೇಳೆಗೆ ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶದಲ್ಲಿ ಒಟ್ಟು 40 ಡೆಲ್ಟಾ ಪ್ಲಸ್ ಪ್ರಕರಣ ದಾಖಲಾಗಿವೆ.
ದೇಶದ 174 ಜಿಲ್ಲೆಗಳಲ್ಲಿ ಈ ವೈರಸ್ ಪತ್ತೆಯಾಗಿದ್ದು, 10 ರಾಜ್ಯಗಳಲ್ಲಿ 48 ಮಾದರಿಗಳನ್ನು ಕಂಡು ಹಿಡಿಯಲಾಗಿದೆ.
ಡೆಲ್ಟಾ ಪ್ಲಸ್ ಎಂದರೇನು?
ಇದು ಡೆಲ್ಟಾ ರೂಪಾಂತರದ ಮುಂದುವರಿದ ಭಾಗ. ಇಂಗ್ಲೆಂಡ್ನ ಸಾರ್ವಜನಿಕ ಆರೋಗ್ಯ ಬುಲೆಟಿನ್ ಪ್ರಕಾರ ಜೂನ್ 11ರಂದು ಭಾರತದಲ್ಲಿ ಈ ಸೋಂಕನ್ನು ಪತ್ತೆ ಹಚ್ಚಲಾಯಿತು. ಈ ವೈರಸ್ ಕೊರೊನಾ ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಡೆಲ್ಟಾ ರೂಪಾಂತರವು ಹೇಗೆ ಭಿನ್ನ?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸ್ಪೈಕ್ ಪ್ರೋಟೀನ್ ರೂಪಾಂತರಗಳು, ಡೆಲ್ಟಾ ರೂಪಾಂತರವನ್ನು ಇನ್ನೂ ವೇಗವಾಗಿ ರೂಪಾಂತರಗೊಳಿಸುತ್ತವೆ.
ಡೆಲ್ಟಾ ರೂಪಾಂತರದ ಮೂಲ ಯಾವುದು?
ಬಿ .1.617.2 ಎಂದು ಕರೆಯಲ್ಪಡುವ ಡೆಲ್ಟಾ, ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಭಾರತದಲ್ಲಿ ಪತ್ತೆಯಾಯಿತು.
ಡೆಲ್ಟಾ ರೂಪಾಂತರವು ಹೆಚ್ಚು ಅಪಾಯಕಾರಿಯೇ?
ಡೆಲ್ಟಾ ರೂಪಾಂತರವು ಕೊರೊನಾಗಿಂತ ಹೆಚ್ಚು ಅಪಾಯಕಾರಿ ಎಂದು ತಿಳಿದು ಬಂದಿದೆ. ಈ ವೈರಸ್ ಒಮ್ಮೆ ದೇಹದೊಳಗೆ ಸೇರಿದರೆ ಆಸ್ಪತ್ರೆಗೆ ಸೇರಬೇಕಾಗುತ್ತದೆ.
ಡೆಲ್ಟಾ ರೂಪಾಂತರವು ಹೆಚ್ಚು ಸಾಂಕ್ರಾಮಿಕವೇ?
ಡೆಲ್ಟಾ ಪ್ಲಸ್ ಆಲ್ಫಾ ಸ್ಟ್ರೈನ್‌ಗಿಂತಲೂ ಹೆಚ್ಚು ಸಾಂಕ್ರಾಮಿಕವಾಗಿ ಕಂಡು ಬರುತ್ತದೆ. ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ನಡೆಸಿದ ಅಧ್ಯಯನದ ಪ್ರಕಾರ, ಡೆಲ್ಟಾ ಆಲ್ಫಾಕ್ಕಿಂತ ಶೇ.60ರಷ್ಟು ಹೆಚ್ಚು ವೇಗವಾಗಿ ಹರಡುತ್ತದೆ.
ಡೆಲ್ಟಾ ರೂಪಾಂತರವು ಎಷ್ಟು ದೇಶಗಳಲ್ಲಿ ಹರಡಿದೆ?
ಡೆಲ್ಟಾ ರೂಪಾಂತರವು ಈಗ 80ಕ್ಕೂ ಹೆಚ್ಚು ದೇಶಗಳಲ್ಲಿ ಕಂಡು ಬಂದಿದೆ. ಆಲ್ಫಾ ರೂಪಾಂತರಕ್ಕಿಂತ ಹೆಚ್ಚು ಹರಡಬಲ್ಲದು. ಡೆಲ್ಟಾ ರೂಪಾಂತರವು ಇಂಗ್ಲೆಂಡ್ನಲ್ಲಿ ಶೇ.90ಕ್ಕಿಂತ ಹೆಚ್ಚು ಕೋವಿಡ್ ಸೋಂಕಿತರಿಗೆ ತಗುಲಿದೆ.
ಈ ರೋಗದ ಲಕ್ಷಣಗಳೇನು?
ಡೆಲ್ಟಾ ಪ್ಲಸ್ ತೀವ್ರವಾದ ರೋಗಲಕ್ಷಣಗಳನ್ನುಂಟ ಮಾಡುತ್ತದೆ ಎಂದು ವರದಿಗಳು ಹೇಳುತ್ತವೆ. ಆದರೆ, ಇದನ್ನು ದೃಢೀಕರಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಇತರೆ ರೋಗಗಳಿಗಿಂತ ಭಿನ್ನವಾದ ಲಕ್ಷಣಗಳು ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ.
ಡೆಲ್ಟಾ ಪ್ಲಸ್ ರೂಪಾಂತರದ ವಿರುದ್ಧ ಲಸಿಕೆಗಳು ಪರಿಣಾಮಕಾರಿಯೇ?
ಡೆಲ್ಟಾ ಪ್ಲಸ್ ರೂಪಾಂತರದ ವಿರುದ್ಧ ಭಾರತೀಯ ಕೊರೊನಾ ಲಸಿಕೆಗಳಾದ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಪರಿಣಾಮಕಾರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ಡೇಂಜರ್ ಡೆಲ್ಟಾ ಪ್ಲಸ್ ನಿಯಂತ್ರಣಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಿ: ಈ ರಾಜ್ಯಗಳಿಗೆ ಕೇಂದ್ರದ ಸೂಚನೆ