ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): 370 ನೇ ವಿಧಿ ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಮೂರು ದಿನಗಳ ಕಾಲ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ.
ಮೃತ ಅಧಿಕಾರಿ ಮನೆಗೆ ಅಮಿತ್ ಶಾ ಭೇಟಿ
ಈ ವೇಳೆ ಅವರು, ಉಗ್ರರಿಂದ ಹತ್ಯೆಗೊಳಗಾದ ಪೊಲೀಸ್ ಅಧಿಕಾರಿ ಪರ್ವೇಜ್ ಅಹ್ಮದ್ ದಾರ್ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಪರ್ವೇಜ್ ಅಹ್ಮದ್ ದಾರ್, ಜೂನ್ 22 ರ ಸಂಜೆ ಪ್ರಾರ್ಥನೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ನೌಗಾಮ್‌ನಲ್ಲಿರುವ ಅವರ ಮನೆಯ ಬಳಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ, ತೀವ್ರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದರು.
ಅಧಿಕಾರಿ ಪತ್ನಿಗೆ ಸರ್ಕಾರಿ ಉದ್ಯೋಗ
ಇದೇ ವೇಳೆ, ಹುತಾತ್ಮ ಪೊಲೀಸ್ ಅಧಿಕಾರಿಯ ಪತ್ನಿ ಫಾತಿಮಾ ಅಖ್ತರ್ ಅವರಿಗೆ ಸಹಾನುಭೂತಿಯ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೇಮಕಾತಿಯ ದಾಖಲೆಗಳನ್ನು ಅಮಿತ್ ಶಾ ಅವರು ನೀಡಿದರು.
ಆರ್ಟಿಕಲ್ 370 ರದ್ಧತಿ ಬಳಿಕ ಮೊದಲ ಭೇಟಿ
ಆರ್ಟಿಕಲ್ 370 ರ ಅಡಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಆಗಸ್ಟ್ 5, 2019 ರಂದು ಹಿಂತೆಗೆದುಕೊಂಡ ನಂತರ ಮತ್ತು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಅಮಿತ್ ಶಾ ಅವರ ಮೊದಲ ಭೇಟಿ ಇದಾಗಿದೆ.
ಶಾ ಅವರ ಭೇಟಿಗೆ ಮುನ್ನ ಕಾಶ್ಮೀರದಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ. ವಿಶೇಷವಾಗಿ ನಗರದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ಅರೆಸೇನಾ ಪಡೆಗಳ ಐವತ್ತು ಕಂಪನಿಗಳು, ಸುಮಾರು 5,000 ಸೈನಿಕರನ್ನು ಕಣಿವೆಗೆ ಸೇರಿಸಲಾಗುತ್ತಿದೆ. ಸಿಆರ್‌ಪಿಎಫ್ ಪಡೆಗಳ ಬಂಕರ್‌ಗಳು ನಗರದ ಹಲವು ಪ್ರದೇಶಗಳಲ್ಲಿ ಹಾಗೂ ಕಾಶ್ಮೀರ ಕಣಿವೆಯ ಇತರ ಭಾಗಗಳಲ್ಲಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪರಿಶೀಲನಾ ಸಭೆ
ಗಡಿಯಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿರುವುದರಿಂದ ಅಮಿತ್ ಶಾ, ಭದ್ರತಾ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಜಮ್ಮು- ಕಾಶ್ಮೀರ ಪೊಲೀಸ್, ಭಾರತೀಯ ಸೇನೆ, ಗುಪ್ತಚರ ಬ್ಯೂರೋ, ಅರೆ ಸೇನಾ ಪಡೆಗಳ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಮೀಟಿಂಗ್ನಲ್ಲಿ ನಾಗರಿಕ ಹತ್ಯೆಗಳು, ಉಗ್ರಗಾಮಿತ್ವ, ಪಾಕ್ನಿಂದ ಬೆದರಿಕೆ ಕುರಿತಂತೆ ಚರ್ಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.