ನವದೆಹಲಿ: ದೆಹಲಿಯ ತಲಾ ಆದಾಯ ಹೆಚ್ಚಳಕ್ಕೆ ರಾಜ್ಯದ ಎರಡು ಕೋಟಿ ಜನರ ಕಠಿಣ ಪರಿಶ್ರಮ ಮತ್ತು ಸರಕಾರದ ಜಂಟಿ ಪ್ರಯತ್ನಗಳೇ ಕಾರಣ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವಿವಾರ ಹೇಳಿದ್ದಾರೆ. ದೆಹಲಿಯ ತಲಾ ಆದಾಯವು ಪ್ರಸಕ್ತ ಹಣಕಾಸು ವರ್ಷದಲ್ಲಿ 3,89,529 ರೂ.ಗಳಿಂದ 4,44,768 ರೂ.ಗೆ ಏರಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಶೇಕಡಾ 158ರಷ್ಟು ಹೆಚ್ಚಾಗಿದೆ ಎಂದು ಕೇಜ್ರಿವಾಲ್ ಸರ್ಕಾರ ಶನಿವಾರ ತನ್ನ ಅಂಕಿಅಂಶ ಕೈಪಿಡಿ -2023 ಬಿಡುಗಡೆ ಮಾಡಿದ ಸಂದರ್ಭದಲ್ಲಿ ತಿಳಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಸಾಮಾಜಿಕ-ಆರ್ಥಿಕ ನಿಯತಾಂಕಗಳ ಡೇಟಾ ಒಳಗೊಂಡ ಕೈಪಿಡಿಯನ್ನು ದೆಹಲಿ ಸರ್ಕಾರದ ಆರ್ಥಿಕ ಮತ್ತು ಅಂಕಿಅಂಶ ಇಲಾಖೆ ಬಿಡುಗಡೆ ಮಾಡಿದೆ. ಸರ್ಕಾರ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ ಎಂದು ಕೇಜ್ರಿವಾಲ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ದೆಹಲಿ ದೇಶದಲ್ಲೇ ಅತಿ ಹೆಚ್ಚು ಕನಿಷ್ಠ ವೇತನ ಹೊಂದಿರುವ ರಾಜ್ಯವಾಗಿದೆ ಎಂದು ಸರ್ಕಾರ ಎತ್ತಿ ತೋರಿಸಿದೆ. ದೆಹಲಿಯಲ್ಲಿ ಕೌಶಲ್ಯರಹಿತರಿಗೆ 17,494 ರೂ., ಅರೆ ಕೌಶಲ್ಯ ಕಾರ್ಮಿಕರಿಗೆ 19,279 ರೂ., ಕುಶಲ ಕಾರ್ಮಿಕರಿಗೆ 21,215 ರೂ., ಕೌಶಲ್ಯರಹಿತ ಕಾರ್ಮಿಕರಿಗೆ 17,494 ರೂ. ಕನಿಷ್ಠ ಸಂಬಳ ಸಿಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಕೇಜ್ರಿವಾಲ್ ಸರ್ಕಾರದ ಮಾಸಿಕ 200 ಯುನಿಟ್ ಉಚಿತ ವಿದ್ಯುತ್ ಯೋಜನೆಯಡಿ 2022-23ರಲ್ಲಿ ಶೂನ್ಯ ಬಿಲ್ನ 3.41 ಕೋಟಿ ವಿದ್ಯುತ್ ಬಿಲ್ಗಳು ಬಂದಿವೆ ಎಂದು ಕೈಪಿಡಿಯಲ್ಲಿ ಹೇಳಲಾಗಿದೆ.