ನವದೆಹಲಿ:ಚೇಂಬರ್ ಗ್ಯಾಸ್ ಆಗಿ ಮಾರ್ಪಾಟಾಗಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ವಾಯುಗುಣಮಟ್ಟ ತುಸು ತಹಬದಿಗೆ ಬರುತ್ತಿದೆ. ಆದರೂ, ಗಾಳಿಯು ಅತ್ಯಂತ ಕಳಪೆಯಾಗಿದ್ದು, ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 393 ದಾಖಲಾಗಿದೆ. ಇನ್ನೊಂದೆಡೆ, ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರಗಳು ಗಾಳಿಯನ್ನು ವಿಷಮಯ ಮಾಡುತ್ತಿವೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.
ಭಾನುವಾರ ಬೆಳಗ್ಗೆ 7 ಗಂಟೆಗೆ ಮಾಹಿತಿಯ ಪ್ರಕಾರ, ಆನಂದ್ ವಿಹಾರ್‌ನಲ್ಲಿ 433, ಅಶೋಕ್ ವಿಹಾರ್‌ನಲ್ಲಿ 434, ಬವಾನಾದಲ್ಲಿ 437, ಜಹಾಂಗೀರ್ಪುರಿಯಲ್ಲಿ 450 ಎಕ್ಯೂಐ ದಾಖಲಾಗಿದೆ. ಇವೆಲ್ಲವೂ ತೀವ್ರ ಕಳಪೆ ವರ್ಗಕ್ಕೆ ಸೇರಿವೆ. ದೆಹಲಿಯ ಕೇಂದ್ರ ಭಾಗದಲ್ಲಿ ಎಕ್ಯೂಐ 382 (ಅತ್ಯಂತ ಕಳಪೆ) ಇದ್ದರೆ, ಅಂತರರಾಷ್ಟ್ರೀಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಪ್ರದೇಶದಲ್ಲಿ 360 (ಅತ್ಯಂತ ಕಳಪೆ) ಎಕ್ಯೂಐ ಹೊಂದಿದೆ.
ವಾರದಿಂದೀಚೆಗೆ ರಾಜಧಾನಿಯಲ್ಲಿ ಒಟ್ಟಾರೆ ಎಕ್ಯೂಐನಲ್ಲಿ ಗಮನಾರ್ಹ ಸುಧಾರಣೆ ಕಂಡು ಬರುತ್ತಿದೆ. ವಾಯು ಗುಣಮಟ್ಟ ನಿರ್ವಹಣಾ ಆಯೋಗ ಗ್ಯಾಪ್ 4 ಅಡಿಯಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಹಂತ ಹಂತವಾಗಿ ಹಿಂಪಡೆಯುತ್ತಿದೆ. ಬಿಎಸ್-3 ಮತ್ತು ಬಿಎಸ್- 4 ಪೆಟ್ರೋಲ್ ಮತ್ತು ಡೀಸೆಲ್ ಹೊರತುಪಡಿಸಿದ ಟ್ರಕ್‌ಗಳು ಮತ್ತು ಬಸ್‌ಗಳಿಗೆ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ನಿರ್ಮಾಣ ಚಟುವಟಿಕೆಗಳ ಮೇಲಿನ ನಿಷೇಧವನ್ನೂ ಸಡಿಲ ಮಾಡಲಾಗಿದೆ. ಆದರೂ, ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ನ 1 ರಿಂದ 3 ಹಂತಗಳ ನಿರ್ಬಂಧಗಳು ಜಾರಿಯಲ್ಲಿವೆ.