ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟವನ್ನು ತಲುಪಿದೆ ಎಂದು ವಾಯು ಗುಣಮಟ್ಟ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆಯು (ಎಸ್‌ಎಎಫ್ಎಆರ್) ವರದಿ ಮಾಡಿದೆ.
ನಿನ್ನೆ ಬೆಳಗ್ಗೆ ನಗರದ ಹಲವು ಭಾಗಗಳಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ವಾಯು ಗುಣಮಟ್ಟವು ಅತ್ಯಂತ ಕಳಪೆ ಮಟ್ಟದಲ್ಲಿ ಉಳಿದುಕೊಂಡಿದೆ ಎಂದು ವರದಿ ಮಾಡಿದೆ.
ಪಶ್ಚಿಮ ಆವಾಂತರದ ಪ್ರಭಾವದಡಿಯಲ್ಲಿ ಚದುರಿದ ಮಳೆಯಿಂದಾಗಿ ಡಿ.11 ಹಾಗೂ 12ರಂದು ವಾತಾವರಣದಲ್ಲಿ ಗಾಳಿ ಗುಣಮಟ್ಟದಲ್ಲಿ ಸುಧಾರಣೆಯಾಗಬಹುದೆಂಬ ನಿರೀಕ್ಷೆಯನ್ನು ಹೊಂದಲಾಗಿದೆ.
ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಡಿ.11ರಂದು ತುಂಬಾ ಕಳಪೆ ವಿಭಾಗದಿಂದ ಕಳಪೆ ಮಟ್ಟಕ್ಕೆ ಸುಧಾರಿಸುವ ಸಾಧ್ಯತೆಯಿದೆ. ಹಾಗೊಂದು ವೇಳೆ ಮಳೆಯಾದಲ್ಲಿ ವಾಯು ಗುಣಮಟ್ಟ ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ ಎಂದು ಎಸ್‌ಎಎಫ್ಎಆರ್ ತಿಳಿಸಿದೆ.
ಓದಿ: ಮಾಸ್ಕ್ ಧರಿಸು ಎಂದಿದ್ದಕ್ಕೆ ಮಾರ್ಷಲ್ಗೆ ಹೊಡೆದ ಮಹಿಳೆ: ವಿಡಿಯೋ ವೈರಲ್
ಎಕ್ಯೂಐನಲ್ಲಿ ಒಳ್ಳೆಯದು, ತೃಪ್ತಿಕರ, ಮಧ್ಯಮ ಕಲುಷಿತ, ಕಳಪೆ, ತುಂಬಾ ಕಳಪೆ ಮತ್ತು ತೀವ್ರ ಕಲುಷಿತ ಆರು ವಿಭಾಗಗಳಿವೆ. ಈ ಪ್ರತಿಯೊಂದು ವಿಭಾಗವನ್ನು ವಾಯು ಮಾಲಿನ್ಯಕಾರಕಗಳ ಸುತ್ತುವರಿದ ಸಾಂದ್ರತೆಯ ಮೌಲ್ಯಗಳು ಮತ್ತು ಅವುಗಳ ಆರೋಗ್ಯದ ಪರಿಣಾಮಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಶುಕ್ರವಾರ ಬೆಳಗ್ಗೆ 9ರ ಸುಮಾರಿಗೆ ಎಕ್ಯೂಐ ಸೂಚಿಯು 302 ರಷ್ಟಿತ್ತು.
ದೆಹಲಿಯ ವಾಯು ಗುಣಮಟ್ಟ ಅಪಾಯಕಾರಿ ಮಟ್ಟವನ್ನು ತಲುಪುತ್ತಿರುವುದು ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಹದೆಗೆಡುತ್ತಿದ್ದು, ಉಸಿರಾಟ ಸಮಸ್ಯೆ, ಕಣ್ಣಿನ ಉರಿ ಹಾಗೂ ತ್ವಚೆಯ ಅಲರ್ಜಿ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ.