ನವದೆಹಲಿ: ಟ್ರೆಡ್‌ಮಿಲ್ ಮೇಲೆ ರನ್ನಿಂಗ್ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿರುವ ಘಟನೆ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದ ಜಿಮ್ ಸೆಂಟರ್‌ನಲ್ಲಿ ಬುಧವಾರ ಬೆಳಗ್ಗೆ 7.15ರ ಸುಮಾರಿಗೆ ನಡೆದಿದೆ. ರೋಹಿಣಿಯ ಸೆಕ್ಟರ್-19ರ ನಿವಾಸಿ ಸಕ್ಷಮ್ (24) ಮೃತರೆಂದು ಎಂದು ತಿಳಿದು ಬಂದಿದೆ.
ಟ್ರೆಡ್‌ಮಿಲ್ ಬಳಸುವಾಗ ವಿದ್ಯುತ್ ಪ್ರವಹಿಸಿ ಸಕ್ಷಮ್ ಕುಸಿದು ಬಿದ್ದಿದ್ದರು. ಸ್ಥಳೀಯ ಬಿಎಸ್‌ಎ ಆಸ್ಪತ್ರೆಗೆ ಕರೆತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷಾ ವರದಿಯ ಆಧಾರದ ಮೇಲೆ ಕೆಎನ್‌ಕೆ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 287/304 ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ಸಮಯದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ವ್ಯಾಯಾಮ ಮಾಡುವಾಗ ಕುಸಿದು ಬಿದ್ದು ಸಾವು:ಕೆಲವು ದಿನಗಳ ಹಿಂದೆ ಬೆಂಗಳೂರಿನಜಿಮ್ವೊಂದರಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ದಿಢೀರ್ ಕುಸಿದು ಬಿದ್ದು ಮಹಿಳೆಯೊಬ್ಬಳು ಕೊನೆಯುಸಿರೆಳೆದಿದ್ದರು. ಬೆಂಗಳೂರಿನ ಮಲ್ಲೇಶಪಾಳ್ಯದಲ್ಲಿನ ಜಿಮ್ವೊಂದರಲ್ಲಿ ವರ್ಕೌಟ್ ಮಾಡುತ್ತಿರುವಾಗ ಘಟನೆ ನಡೆದಿತ್ತು. ವಿನಯ ಕುಮಾರಿ ಮೃತ ಮಹಿಳೆ ಎಂದು ಗುರುತಿಸಲಾಗಿತ್ತು. ಇವರು ಐಡಿಸಿ ಕಂಪನಿಯಲ್ಲಿ ಬ್ಯಾಕ್ಗ್ರೌಂಡ್ ವೆರಿಫಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.