ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ 72 ವರ್ಷದ ಪತಿಯನ್ನೇ ಆತನ ಪತ್ನಿ ಬೆಂಕಿ ಹಚ್ಚಿ ಸುಟ್ಟು ಕೊಲೆಗೆ ಯತ್ನಿಸಿರುವ ಘಟನೆ ವಾಯವ್ಯ ದೆಹಲಿಯ ಶಾಲಿಮಾರ್ ಬಾಗ್ ಗ್ರಾಮದಲ್ಲಿ ಜರುಗಿದೆ.
ಕೆಲ ದಿನಗಳಿಂದ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಿತ್ತು. ಆದರೆ, ಇದೇ ಸೋಮವಾರ ರಾತ್ರಿ ಕೂಡ ಜಗಳ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿದೆ. ಆಗ 70 ವರ್ಷದ ಪತ್ನಿ ಮಲಗಿದ್ದ ತನ್ನ ಪತಿ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿಯಿಂದ ಆ ವ್ಯಕ್ತಿಯ ಕಿರುಚಾಟ ಕೇಳಿ ಮಹಡಿಯಲ್ಲಿ ಮಲಗಿದ್ದ ಮಗ ಮತ್ತು ಸೊಸೆ ಕೆಳಗೆ ಓಡಿ ಬಂದಿದ್ದಾರೆ. ಆಗ ಕೂಡಲೇ ವೃದ್ಧನನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ವೃದ್ಧನಿಗೆ 85ರಷ್ಟು ಸುಟ್ಟ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ನವದೆಹಲಿಯ ಏಮ್ಸ್ ಟ್ರಾಮಾ ಸೆಂಟರ್‌ಗೆ ವೃದ್ಧನನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಪತ್ನಿ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಾಯುವ್ಯ ಜಿಲ್ಲೆಯ ಹೆಚ್ಚುವರಿ ಡಿಸಿಪಿ ಅಪೂರ್ವ ಗುಪ್ತಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪ್ರೀತಿಸಲು ನಿರಾಕರಿಸಿದ ಯುವತಿ: ಮನೆಗೆ ನುಗ್ಗಿ ಹತ್ಯೆ ಮಾಡಿದ ಯುವಕ