ನವದೆಹಲಿ:ಶ್ರದ್ಧಾ ವಾಕರ್ ಹಾಗೂ ನಿಕ್ಕಿ ಯಾದವ್ ಕೊಲೆ ಪ್ರಕರಣದ ನಂತರ ದೆಹಲಿಯಲ್ಲಿ ಮತ್ತೊಂದು ಅಂತಹದ್ದೇ ರೀತಿಯ ಆಘಾತಕಾರಿ ಘಟನೆ ವರದಿಯಾಗಿದೆ. ಡ್ರಗ್ಸ್ ವಿಚಾರವಾಗಿ ಗಲಾಟೆ ನಡೆದು ವ್ಯಕ್ತಿಯೋರ್ವ ಲಿವ್ ಇನ್ ಸಂಗಾತಿಗೆ 'ಟರ್ಪಂಟೈನ್ ಆಯಿಲ್' ಸುರಿದು ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ವಾಯವ್ಯ ದೆಹಲಿಯ ಅಮನ್ ವಿಹಾರ್‌ನಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಶ್ರದ್ಧಾ ಮರ್ಡರ್ ರೀತಿಯ ಮತ್ತೊಂದು ಘಟನೆ: ಪ್ರೇಯಸಿ ಕೊಲೆ ಮಾಡಿ ಫ್ರಿಜ್ನಲ್ಲಿ ಶವ ಬಚ್ಚಿಟ್ಟ ಯುವಕ!
ಫೆ.11 ರಂದು, ಸುಟ್ಟ ಗಾಯಗಳೊಂದಿಗೆ ಮಹಿಳೆಯನ್ನು ಎಸ್‌ಜಿಎಂ ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪೊಲೀಸರು ಆಸ್ಪತ್ರೆಗೆ ತೆರಳಿದಾಗ ಮಹಿಳೆಯ ಸ್ಥಿತಿ ಚಿಂತಾಜನಕವಾಗಿತ್ತು. ಇದರಿಂದ ಆಕೆಯಿಂದ ಯಾವುದೇ ಹೇಳಿಕೆಯನ್ನು ದಾಖಲಿಸಲು ಸಾಧ್ಯವಾಗಿರಲ್ಲ. ಬಳಿಕ ಆಕೆ ವಾಯುವ್ಯ ದೆಹಲಿಯ ಬಲ್ಬೀರ್ ವಿಹಾರ್ ನಿವಾಸಿ ಎಂದು ಗುರುತಿಸಲಾಗಿತ್ತು. ಆಕೆ ಪಾದರಕ್ಷೆ ಕಾರ್ಖಾನೆಯೊಂದರಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ ಆಕೆ ಸೋಮವಾರ ಮೃತಪಟ್ಟಿದ್ದಾಳೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆಕೆಯ ಕುಟುಂಬ ಸದಸ್ಯರ ಹೇಳಿಕೆಯ ಆಧಾರದ ಮೇಲೆ ಅಮನ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.