ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶದಲ್ಲಿ ಚಳಿ ಪ್ರಮಾಣ ತೀವ್ರವಾಗಿದೆ. ಈ ಶೀತಗಾಳಿ ವಾರಾಂತ್ಯದವರೆಗೂ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ಜನವರಿ 19ರ ನಂತರ ಎರಡು 'ವೆಸ್ಟರ್ನ್ ಡಿಸ್ಟರ್ಬೆನ್ಸಸ್' ಪ್ರಭಾವದಿಂದ ಈ ಶೀತ ಗಾಳಿ ಕಡಿಮೆ ಆಗಬಹುದು ಎಂದು ಐಎಂಡಿ ತಿಳಿಸಿದೆ.
ಇನ್ನು ಭಾರಿ ಚಳಿಯಿಂದ ಉಂಟಾದ ದಟ್ಟ ಮಂಜಿನ ವಾತಾವರಣದ ಹಿನ್ನೆಲೆಯಲ್ಲಿ ಗೋಚರತೆ ಪ್ರಮಾಣ ಕ್ಷೀಣಿಸಿದೆ. ದೆಹಲಿಯಲ್ಲಿ ಅನೇಕ ವಿಮಾನಗಳು ವಿಳಂಬವಾಗಿ ಹಾರಾಟ ನಡೆಸಿದ್ದು, ಉತ್ತರ ರೈಲ್ವೆ ಪ್ರದೇಶದಲ್ಲಿ ಆರು ರೈಲುಗಳು ಕೂಡ ತಡವಾಗಿ ಸಂಚಾರ ಆರಂಭಿಸಿವೆ. ಮಂಗಳವಾರ ಮುಂಜಾನೆ ಮಂಜು ಮುಸುಕಿದ ವಾತಾವರಣದಿಂದ ರೈಲು ಸಂಚಾರಗಳು ಒಂದರಿಂದ ಎಂಟು ತಾಸು ತಡವಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ದಾಖಲೆ ಚಳಿ: ದೆಹಲಿಯ ಕೆಲವು ಪ್ರದೇಶದಲ್ಲಿ 4.6 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣಾಂಶ ದಾಖಲಾಗಿದೆ. 2021ರ ಬಳಿಕ ದೆಹಲಿಯ ಅನೇಕ ಪ್ರದೇಶದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. 2021ರ ಜನವರಿ 1ರಂದು ಸಫ್ಧರ್ಜಂಗ್ನಲ್ಲಿ 1.4 ಡಿಗ್ರಿ ಇದ್ದರೆ, ಲೋಧಿ ರಸ್ತೆಯಲ್ಲಿ 1.6 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ. ಈ ವರ್ಷ ಜನವರಿ 5 ರಿಂದ 9ನೇ ತಾರೀಖಿನವರೆಗೆ ಭಾರಿ ಚಳಿಗೆ ರಾಷ್ಟ್ರ ರಾಜಧಾನಿ ತತ್ತರಿಸಿದೆ. ದಶಕದಲ್ಲಿ ಎರಡನೇ ದೀರ್ಘ ಶೀತಗಾಳಿಗೆ ದೆಹಲಿ ಸಾಕ್ಷಿಯಾಗಿದೆ. ಈ ತಿಂಗಳಲ್ಲಿ ದೆಹಲಿ 50 ಗಂಟೆಗಳ ದಟ್ಟ ಮಂಜು ವಾತಾವರಣ ಹೊಂದಿರುವ ದಾಖಲೆಯೂ ಇದೆ. 2019ರಲ್ಲಿ ಕೂಡ ರಾಷ್ಟ್ರ ರಾಜಧಾನಿ ಅತಿ ಹೆಚ್ಚು ದಟ್ಟ ಮಂಜಿನ ವಾತಾವರಣದಿಂದ ತತ್ತರಿಸಿತ್ತು.