ಕರ್ನಾಟಕ

karnataka

ಚಳಿಗೆ ನಲುಗಿದ ಉತ್ತರ ಭಾರತ: ದೆಹಲಿಯಲ್ಲಿ 3 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ, ಕಾಶ್ಮೀರದಲ್ಲಿ ಮೈನಸ್​ಗೆ ಕುಸಿತ

By

Published : Jan 5, 2023, 2:30 PM IST

ರಾಷ್ಟ್ರ ರಾಜಧಾನಿಯಲ್ಲಿಯಲ್ಲಿಂದು ಕನಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆ ಇಳಿದಿದೆ. ಇಲ್ಲಿನ ಆಯಾ ನಗರ ಮತ್ತು ರಿಡ್ಜ್‌ನಲ್ಲಿ ಕ್ರಮವಾಗಿ 2.2 ಹಾಗೂ 2.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಮುಂದಿನ 2-3 ದಿನಗಳ ಕಾಲ ತೀವ್ರ ಚಳಿಯ ಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

delhi temperature
ಚಳಿ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಚಳಿಯಿಂದ ಅಕ್ಷರಶಃ ನಲುಗಿ ಹೋಗಿದೆ. ಇಂದು ತಾಪಮಾನ 3 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದ್ದು, ಪರಿಣಾಮ ಜನರು ತೀವ್ರ ಚಳಿಯ ಅನುಭವ ಪಡೆದುಕೊಂಡಿದ್ದಾರೆ. ಮುಂದಿನ ಎರಡು-ಮೂರು ದಿನ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಹಿಮಪಾತ ಮತ್ತು ಶೀತ ಗಾಳಿಯಿಂದಾಗಿ ದೆಹಲಿಯ ತಾಪಮಾನವು ಮತ್ತೊಮ್ಮೆ ಕುಸಿತಕ್ಕೆ ಸಾಕ್ಷಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಷ್ಟೇ ಅಲ್ಲದೇ ಈ ಕುರಿತಾದ ಫೋಟೋವೊಂದನ್ನು ಸಹ ಹಂಚಿಕೊಂಡಿದ್ದು, ಇಡೀ ಉತ್ತರ ಭಾರತ ಚಳಿಗಾಳಿಗೆ ಸಿಲುಕಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇಂದು ಬೆಳಗ್ಗೆ ಜಮ್ಮು, ಬಟಿಂಡಾ, ಅಮೃತಸರ, ಪಟಿಯಾಲ, ಅಂಬಾಲಾ, ಸೋನಿಪತ್, ಪಾಣಿಪತ್, ಚಂಡೀಗಢ, ಗಂಗಾನಗರ, ಚುರು, ಆಗ್ರಾ, ಝಾನ್ಸಿ ಮುಂತಾದೆಡೆ ದಟ್ಟ ಮಂಜಿನಿಂದ ಎಲ್ಲ ಪ್ರದೇಶಗಳು ಆವರಿಸಿಕೊಂಡಿರುವಂತೆ ಕಂಡು ಬಂದಿತು. ಜೊತೆಗೆ ದೆಹಲಿಯ ಪಾಲಂ ಮತ್ತು ಸಫ್ದರ್‌ಜಂಗ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಸಹ ದಟ್ಟವಾದ ಮಂಜು ಇತ್ತು. ಗೋಚರತೆ 25 ರಿಂದ 75 ಮೀಟರ್‌ಗೂ ಕಡಿಮೆ ಆಗಿದೆ.

ಇದನ್ನೂ ಓದಿ:ಚಾಮರಾಜನಗರದಲ್ಲಿ ಮಂಜಿನ ಚಾದರ..‌ ಚುಮುಚುಮು ಚಳಿ ಕಾಡಲ್ಲಿ ಹಸಿರಿನ ಕಚಗುಳಿ

ಹವಾಮಾನ ಇಲಾಖೆ ಪ್ರಕಾರ, ಗೋಚರತೆಯು 0 ಮತ್ತು 50 ಮೀಟರ್‌ಗಳ ನಡುವೆ ಅತ್ಯಂತ ದಟ್ಟವಾದ ಮಂಜು. 51 ಮತ್ತು 200 ಮೀಟರ್‌ಗಳು ದಟ್ಟ ಮಂಜು, 201 ಮತ್ತು 500 ಮೀಟರ್‌ಗಳು ಮಧ್ಯಮ ಮಂಜು ಮತ್ತು 501 ಮತ್ತು 1,000 ಮೀಟರ್‌ಗಳು ಆಗಿದ್ದರೆ ತೀರ ಕಡಿಮೆಯಾದ ಮಂಜು ಕವಿದಿರುತ್ತದೆ.

ಇದನ್ನೂ ಓದಿ:ಬೀದಿನಾಯಿಗಳ ರಕ್ಷಕಿ ವೃದ್ಧೆಯ ಗುಡಿಸಲು ನೆಲಸಮ; ರಸ್ತೆಬದಿ ಮೈಕೊರೆವ ಚಳಿಯಲ್ಲೇ ಜೀವನ

ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಗುರುವಾರ ಬೆಳಗ್ಗೆ 8.30 ಕ್ಕೆ ದೆಹಲಿಯ ಸಫ್ದರ್‌ಜಂಗ್ ಪ್ರದೇಶದಲ್ಲಿ ಕನಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್, ಪಾಲಂನಲ್ಲಿ 6 ಡಿಗ್ರಿ ಸೆಲ್ಸಿಯಸ್, ಲೋಧಿ ರಸ್ತೆ 2.8 ಡಿಗ್ರಿ ಸೆಲ್ಸಿಯಸ್, ರಿಡ್ಜ್ 2.8 ಡಿಗ್ರಿ ಸೆಲ್ಸಿಯಸ್, ಮತ್ತು ಆಯಾ ನಗರದಲ್ಲಿ 2.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮತ್ತೊಂದೆಡೆ, ಇಂದು ದೆಹಲಿಯಲ್ಲಿ ಗರಿಷ್ಠ ತಾಪಮಾನವು 14 ರಿಂದ 17 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಸೂರ್ಯೋದಯವು ಇಂದು ಬೆಳಗ್ಗೆ 7.15 ಕ್ಕೆ ಸಂಭವಿಸಿದ್ದು, ಸಂಜೆ 5.39ಕ್ಕೆ ಸೂರ್ಯಾಸ್ತವಾಗಲಿದೆ.

ಕಾಶ್ಮೀರದಲ್ಲಿ ಮೈನಸ್​​​ಗೆ​​​ ಕುಸಿದ ತಾಪಮಾನ:ಶ್ರೀನಗರದಲ್ಲಿ ತಾಪಮಾನ ಮೈನಸ್ 6.4 ಡಿಗ್ರಿ ಸೆಲ್ಸಿಯಸ್​ಗೆ ಕುಸಿತ ಕಂಡಿದೆ. ಶ್ರೀನಗರ ಈ ಋತುವಿನ ಅತ್ಯಂತ ಕಡಿಮೆ ತಾಪಮಾನವನ್ನು ದಾಖಲಿಸಿದೆ. ಅಲ್ಲಿನ ಹವಾಮಾನ ಇಲಾಖೆ ಮುಂದಿನ 24 ಗಂಟೆಗಳ ಕಾಲ ತೀವ್ರ ಚಳಿ ಮತ್ತು ಶುಷ್ಕ ಹವಾಮಾನ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದೆ. 2021ರ ಜನವರಿ 31 ರಂದು ಶ್ರೀನಗರದಲ್ಲಿ ಕನಿಷ್ಠ ತಾಪಮಾನವು ಮೈನಸ್ 8.8 ಕ್ಕೆ ಕುಸಿದಿತ್ತು. ಆದರೆ, ಈ ಬಾರಿ ಜನವರಿ ಮೊದಲ ವಾರದಲ್ಲೇ ಕನಿಷ್ಠ ತಾಪಮಾನ ದಾಖಲಾಗಿದೆ.

ಇದನ್ನೂ ಓದಿ:ಶೀತಗಾಳಿ, ದಟ್ಟ ಮಂಜಿಗೆ ಉತ್ತರ ಭಾರತ ತತ್ತರ; ಲಡಾಕ್‌ನಲ್ಲಿ ಮೈನಸ್‌ 20 ಡಿಗ್ರಿ ತಾಪಮಾನ!

ABOUT THE AUTHOR

...view details