ನವದೆಹಲಿ:ದೆಹಲಿ- ಸ್ಯಾನ್ ಫ್ರಾನ್ಸಿಸ್ಕೋ ನಡುವಣ ಏರ್ ಇಂಡಿಯಾ AI173 ವಿಮಾನದಲ್ಲಿ ಮಂಗಳವಾರ ಎಂಜಿನ್ ದೋಷ ಕಂಡುಬಂದ ಪರಿಣಾಮ ರಷ್ಯಾದ ಮಗದನ್ನಲ್ಲಿ ಲ್ಯಾಂಡಿಂಗ್ ಮಾಡಲಾಯಿತು ಎಂದು ಏರ್‌ಲೈನ್ಸ್ ತಿಳಿಸಿದೆ. ವಿಮಾನದಲ್ಲಿ 216 ಪ್ರಯಾಣಿಕರು ಹಾಗು 16 ಮಂದಿ ಸಿಬ್ಬಂದಿ ಇದ್ದರು. ವಿಮಾನ ದೆಹಲಿಯಿಂದ ನಿಗದಿತ ಸಮಯಕ್ಕೆ ಹೊರಟಿತ್ತು. ಹಾರಾಟದ ಸಮಯದಲ್ಲಿ ಎಂಜಿನ್‌ವೊಂದರಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಸುರಕ್ಷಿತವಾಗಿ ಮಗದನ್ ವಿಮಾನ ನಿಲ್ದಾಣದಲ್ಲಿ ವ್ಯವಸ್ಥೆ ಕಲ್ಪಿಸಿ ಸುರಕ್ಷಿತವಾಗಿ ಇಳಿಸಲಾಯಿತು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕಿ: ಭರದಿಂದ ಸಾಗಿದ ರಕ್ಷಣಾ ಕಾರ್ಯ- ವಿಡಿಯೋ
ಏರ್ ಇಂಡಿಯಾ ಪ್ರಕಟಣೆ:"ಪ್ರಯಾಣಿಕರಿಗೆ ಎಲ್ಲ ಬೆಂಬಲವನ್ನು ಒದಗಿಸಲಾಗುತ್ತಿದೆ. ಶೀಘ್ರವಾಗಿ ಅವರು ತಲುಪಬೇಕಾದ ಸ್ಥಳಗಳಿಗೆ ಹೋಗಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ಲ್ಯಾಂಡಿಂಗ್ ಆಗಿರುವ ವಿಮಾನವನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ" ಎಂದು ಏರ್ ಇಂಡಿಯಾ ತಿಳಿಸಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ಕೆಟ್ಟ ಹವಾಮಾನ ಮತ್ತು ದಟ್ಟಣೆಯ ಕಾರಣ ಚೆನ್ನೈನಿಂದ ಸಿಂಗಾಪುರಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ಮಲೇಷ್ಯಾದಲ್ಲಿ ಇಳಿಸಲಾಗಿತ್ತು.