ನವದೆಹಲಿ: ದೆಹಲಿ ಗಲಭೆ ಸಂಚು ಪ್ರಕರಣ ಸಂಬಂಧ ಉಗ್ರ ನಿಗ್ರಹ ಕಾನೂನು (UAPA) ಅಡಿಯಲ್ಲಿ ಬಂಧಿಸಲಾಗಿರುವ ಜೆಎನ್ಯು(JNU) ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ಈ ಚಾರ್ಜ್ಶೀಟ್ ವೆಬ್ ಸೀರೀಸ್ ಅಥವಾ ಮಾಧ್ಯಮದಲ್ಲಿ ಬರುವ ಸ್ಕ್ರಿಪ್ಟ್ ಓದಿದಂತೆ ಭಾಸವಾಗುತ್ತದೆ ಎಂದು ಖಾಲಿದ್ ಪರ ವಕೀಲರು ಅಭಿಪ್ರಾಯಪಟ್ಟಿದ್ದಾರೆ. 2020ರ ಫೆಬ್ರವರಿ ಗಲಭೆಗೆ ಸಂಚು ರೂಪಿಸಿದ್ದ ಆರೋಪದಡಿ ಖಾಲಿದ್ ಹಾಗೂ ಇತರರನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ 53 ಮಂದಿ ಮೃತಪಟ್ಟಿದ್ದು, 700 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಜಾಮೀನು ಕೋರಿ ಖಾಲಿದ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಖಾಲಿದ್ ಪರ ವಾದಿಸಿದ ಹಿರಿಯ ವಕೀಲ ತ್ರಿದೀಪ್ ಪಾಯ್ಸ್, ತನ್ನ ಕಕ್ಷಿದಾರರ ಮೇಲೆ ಯಾವುದೇ ವಾಸ್ತವಿಕ ಆಧಾರಿವಿಲ್ಲದೆ, ಆರೋಪಗಳನ್ನು ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿಯ ಕಲ್ಪನೆಯ ಫಲವೇ ಚಾರ್ಜ್ಶೀಟ್ ಎಂದಿದ್ದಾರೆ.
ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್, ಹ್ಯಾರಿ ಪಾಟರ್ ಸೀರೀಸ್ನ ಖಳನಾಯಕ ವೋಲ್ಡ್ ಮಾರ್ಟ್ನ ಪಾತ್ರದಂತಿದ್ದು, ಅದರಲ್ಲಿ ಉಲ್ಲೇಖಿಸಿರುವ ಅಂಶಗಳೆಲ್ಲ ನಿರಾಧಾರ ಎಂದಿದ್ದಾರೆ. ಸಾಕ್ಷ್ಯಗಳನ್ನು ಸಂಗ್ರಹಿಸಿ ಚಾರ್ಜ್ ಶೀಟ್ ಬರೆಯಬೇಕು. ಆದರೆ, ಪೊಲೀಸರು ವೆಬ್ ಸರಣಿ ( ಫ್ಯಾಮಿಲ್ ಮ್ಯಾನ್-2 ವೆಬ್ ಸರಣಿಗೆ ಹೋಲಿಸಿ) ಬರೆದಿದ್ದಾರೆ ಎಂದು ವಕೀಲ ಪಾಯ್ಸ್ ಆರೋಪಿಸಿದ್ದಾರೆ.
ಉಮರ್ ಭಾಷಣಗಳಲ್ಲಿ ಕಾನೂನುಬಾಹಿರ ಕ್ರಮ, ದೇಶದ್ರೋಹ, ದ್ವೇಷ ಅಥವಾ ಯಾವುದೇ ರೀತಿಯ ಕಾನೂನುಬಾಹಿರತೆಗೆ ಕಾರಣವಾಗಿಲ್ಲ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು. ವಾದವನ್ನಾಲಿಸಿದ ಹೆಚ್ಚುವರಿ ಸೆಷನ್ ನ್ಯಾಯಾಲಯದ ನ್ಯಾಯಾಧೀಶ ಅಮಿತಾಭ್ ರಾವತ್ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 6 ಕ್ಕೆ ಮುಂದೂಡಿದರು.
ಇದನ್ನೂ ಓದಿ: ಆಜಾದಿ ಆಂದೋಲನದಲ್ಲಿ ಅಚ್ಚಳಿಯದ ಜಲಿಯನ್ ವಾಲಾಬಾಗ್.. ಸ್ವಾತಂತ್ರ್ಯದ ಕಿಡಿ ಮತ್ತಷ್ಟು ಹೆಚ್ಚಿಸುವಂತೆ ಮಾಡಿತು ನರಮೇಧ..
ಖಾಲಿದ್ ಜಾಮೀನು ಪಡೆಯಲು ಯಾವುದೇ ಅರ್ಹತೆ ಹೊಂದಿಲ್ಲ ಎಂದು ದೆಹಲಿ ಪೊಲೀಸರು ಅಭಿಪ್ರಾಯ ಪಟ್ಟಿದ್ದರು.