ನವದೆಹಲಿ: ದೇಶದಲ್ಲಿ ಈಗಾಗಲೇ ಕೋವಿಡ್ ಮೂರನೇ ಅಲೆ ಆತಂಕ ಎದುರಾಗಿದೆ. ಈ ಬೆನ್ನಲ್ಲೇ ಶನಿವಾರದಂದು ದೆಹಲಿಯಲ್ಲಿ 2,716 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇ 3.64 ಇದೆ.
ಕಳೆದ ಮೇ 21 ರಿಂದ ನಿನ್ನೆಯೇ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಹೊಸ ವರ್ಷದ ಮುನ್ನಾದಿನ ಶುಕ್ರವಾರದಂದು 1,796 ಹೊಸ ಪ್ರಕರಣಗಳು ವರದಿಯಾಗಿದ್ದವು.
ಶನಿವಾರ ಹೊರಡಿಸಿದ ಆರೋಗ್ಯ ಬುಲೆಟಿನ್ ಪ್ರಕಾರ, ದೆಹಲಿಯ ಆಸ್ಪತ್ರೆಗಳಲ್ಲಿ 8,883 ಕೋವಿಡ್ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಕೋವಿಡ್ ಸೋಂಕಿತರು ಸೇರಿದಂತೆ ಅನಾರೋಗ್ಯಕ್ಕೊಳಗಾದವರಿಗೆ 247 ಬೆಡ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ 8,636 ಹಾಸಿಗೆಗಳು ಖಾಲಿ ಇವೆ.