ಹೈದರಾಬಾದ್ : ಸೈಬರ್ ಕ್ರೈಮ್ ನಿಗ್ರಹಿಸುವ ಪ್ರಯತ್ನವಾಗಿ ದೆಹಲಿ ಪೊಲೀಸರು ಟ್ರೂ ಕಾಲರ್‌ನೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದ್ದಾರೆ. ಮೊಬೈಲ್ ಕರೆ ಮಾಡುವ ಸಮಯದಲ್ಲಿ ಕರೆ ಮಾಡುವವರ ಮತ್ತು ಕರೆ ಸ್ವೀಕರಿಸುವವರ ಸಂಖ್ಯೆಯನ್ನು ಪರಸ್ಪರ ತೋರಿಸುವ ಆ್ಯಪ್ ಟ್ರೂಕಾಲರ್ ಆಗಿದೆ. ಟ್ರೂಕಾಲರ್ ಬಳಕೆದಾರರಿಗೆ ಸೈಬರ್ ವಂಚನೆಗಳು ಮತ್ತು ಇತರರ ಹೆಸರಿನಲ್ಲಿ ಕರೆ ಮಾಡಿ ವಂಚಿಸುವ ಯತ್ನಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಇತರ ಬಳಕೆದಾರರ ಸಲಹೆಗಳನ್ನು ಆಧರಿಸಿ ಟ್ರೂಕಾಲರ್ ನಿರ್ದಿಷ್ಟ ಸಂಖ್ಯೆಗಳ ಮೇಲೆ ಬ್ಯಾಡ್ಜ್ ಅನ್ನು ತೋರಿಸುತ್ತದೆ.
ಒಪ್ಪಂದದ ಭಾಗವಾಗಿ ಕಿರುಕುಳ, ಹಗರಣ ಮತ್ತು ಇತರ ನೋಂದಾಯಿತ ಸಮಸ್ಯೆಗಳಿಗೆ ಸಂಬಂಧಿಸಿದ ಫೋನ್ ನಂಬರ್ಗಳನ್ನು ದೆಹಲಿ ಪೊಲೀಸರು ಟ್ರೂಕಾಲರ್ಗೆ ನೀಡಲಿದ್ದಾರೆ. ಟ್ರೂಕಾಲರ್ ಇಂಥ ನಂಬರ್ಗಳನ್ನು ವಿಶೇಷವಾಗಿ ಮಾರ್ಕ್ ಮಾಡಲಿದೆ. ಈ ಒಪ್ಪಂದದ ಕಾರಣದಿಂದ ದೆಹಲಿ ನಾಗರಿಕರು ಈ ನಂಬರ್ಗಳಿಂದ ತಮಗೆ ಕರೆ ಬಂದಾಗ ಜಾಗೃತಿ ವಹಿಸಬಹುದು ಹಾಗೂ ಈ ನಂಬರ್ಗಳು ಇನ್ನೂ ಸಕ್ರಿಯವಾಗಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಬಹುದು.
ಈ ಹಿಂದೆಯೂ ಸಹ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಟ್ರೂಕಾಲರ್ ಪೊಲೀಸ್ ಇಲಾಖೆಗೆ ಸಾಕಷ್ಟು ಸಹಾಯ ಮಾಡಿತ್ತು. ಆಮ್ಲಜನಕದ ಸಿಲಿಂಡರ್‌ಗಳು, ಕಾನ್ಸೆಂಟ್ರೇಟರ್‌ಗಳು, ಔಷಧಗಳು ಮತ್ತು ವೈರಸ್ ಚಿಕಿತ್ಸೆಗೆ ಸಂಬಂಧಿಸಿದ ಇತರ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ನೆಪದಲ್ಲಿ ಸಾಕಷ್ಟು ವಂಚನೆಗಳು ನಡೆದಿದ್ದವು. ಇವನ್ನು ತಡೆಯಲು ಟ್ರೂಕಾಲರ್ ತುಂಬಾ ಸಹಕಾರಿಯಾಗಿತ್ತು.