ಜೈಪುರ (ರಾಜಸ್ಥಾನ): ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಜಸ್ಥಾನದ ಸಚಿವ ಮಹೇಶ್ ಜೋಷಿ ಅವರ ಮಗ ರೋಹಿತ್ ಜೋಷಿಗೆ ದೆಹಲಿ ಪೊಲೀಸರು ಭಾನುವಾರ ಸಮನ್ಸ್ ಜಾರಿ ಮಾಡಿದ್ದಾರೆ. ಮೇ 18ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸಚಿವ ಜೋಷಿ ಮನೆಯ ಹೊರಗೆ ಸಮನ್ಸ್ ಪ್ರತಿಯನ್ನು ಪೊಲೀಸರು ಅಂಟಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ 24 ವರ್ಷದ ಮಹಿಳೆಯು ರೋಹಿತ್ ಜೋಷಿ ವಿರುದ್ಧ ದೆಹಲಿಯ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ 15 ಜನ ಸಿಬ್ಬಂದಿಯ ತಂಡ ಜೈಪುರಕ್ಕೆ ಬಂದು ಸಮನ್ಸ್ ನೀಡಿದ್ದಾರೆ.