ಕರ್ನಾಟಕ

karnataka

ETV Bharat / bharat

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಬಂಧಿಸುವಷ್ಟು ಪುರಾವೆಗಳಿಲ್ಲ, 15 ದಿನದ ಒಳಗೆ ಕೋರ್ಟ್​ಗೆ ವರದಿ ಸಲ್ಲಿಕೆ: ದೆಹಲಿ ಪೊಲೀಸ್​​​

ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ, ಈ ಬಗ್ಗೆ ವರದಿಯನ್ನು ಕೋರ್ಟ್​ಗೆ 15 ದಿನಗಳ ಒಳಗೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

brij bhushan singh
ಬ್ರಿಜ್ ಭೂಷಣ್ ಸಿಂಗ್

By

Published : May 31, 2023, 8:02 PM IST

ನವದೆಹಲಿ: ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಲು ಇದುವರೆಗೆ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಕುಸ್ತಿಪಟುಗಳು ಮಾಡಿರುವ ಆರೋಪವನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ. 15 ದಿನಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೇವೆ. ಅದು ಚಾರ್ಜ್ ಶೀಟ್ ಆಗಿರಬಹುದು ಅಥವಾ ಅಂತಿಮ ವರದಿಯಾಗಿರಬಹುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ನಿನ್ನೆ ದೆಹಲಿಯ ಹೈಕೋರ್ಟ್​ ಬ್ರಿಜ್‌ಭೂಷಣ್ ಶರಣ್ ಸಿಂಗ್ ಪ್ರಕರಣದ ಬಗ್ಗೆ ದೆಹಲಿ ಸರ್ಕಾರ ಮತ್ತು ಪೊಲೀಸರಿಂದ ಸ್ಪಷ್ಟನೆ ಕೇಳಿತ್ತು. ತನಿಖೆಯ ಬಗ್ಗೆ ಮಾಹಿತಿ ನೀಡುವಂತೆ ಮತ್ತು ದಾಖಲಾದ ಎರಡು ಪ್ರಕರಣಗಳು ಯಾವ ಕೋರ್ಟ್​ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪ್ರಶ್ನಿಸಿತ್ತು. ಈ ಬಗ್ಗೆ ಮಾಧ್ಯಮದವರು ದೆಹಲಿ ಪೊಲೀಸರನ್ನು ಪ್ರಶ್ನಿಸಿದಾಗ ಸೂಕ್ತ ಸಾಕ್ಷ್ಯಗಳು ದೊರೆತಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಕುಸ್ತಿಪಟುಗಳ ಹೇಳಿಕೆಯನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಎಫ್‌ಐಆರ್‌ನಲ್ಲಿ ಸೇರಿಸಲಾದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಸೆಕ್ಷನ್‌ ಅಡಿ ಏಳು ವರ್ಷ ಜೈಲು ಶಿಕ್ಷೆ ಇದೆ. ಹೀಗಾಗಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಆರೋಪಿಗಳು ಹೇಳಿದ ಮಾತ್ರಕ್ಕೆ ಅವರನ್ನು ಬಂಧಿಸಲು ಸಾಧ್ಯವಿಲ್ಲ. ಆರೋಪಿಯು ಸಾಕ್ಷಿಯ ಮೇಲೆ ಪ್ರಭಾವ ಬೀರುವುದಿಲ್ಲ ಅಥವಾ ಸಾಕ್ಷ್ಯವನ್ನು ನಾಶಪಡಿಸುವುದಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.

ಕಪಿಲ್ ಸಿಬಲ್ ಟೀಕೆ:ಪೊಲೀಸ್​ ಈ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್​ ಲೇವಡಿ ಮಾಡಿದ್ದಾರೆ. ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಎತ್ತಿರುವ ಲೈಂಗಿಕ ಕಿರುಕುಳ ಆರೋಪಗಳ ವಿಷಯದ ಬಗ್ಗೆ ಕಪಿಲ್ ಸಿಬಲ್ ಬುಧವಾರ ಪ್ರಶ್ನೆಗಳನ್ನು ಎತ್ತಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಕೇಸರಿ ಪಕ್ಷದ ಸಂಸದರಾಗಿರುವುದರಿಂದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ತಕ್ಷಣದ ಬಂಧನದ ನಿಯಮವು ಅವರಿಗೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಪದಕ ಎಸೆಯುತ್ತೇವೆ ಎಂದು ನಾಟಕ- ಬ್ರಿಜ್​ ಭೂಷಣ್​: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಕುಸ್ತಿಪಟುಗಳು ನದಿಗೆ ಪದಕ ಎಸೆಯುತ್ತೇವೆ ಎಂದು ಹೇಳಿ ಹಿಂದಿರುಗಿದ್ದನ್ನು ಇದೆಲ್ಲ ಭಾವನಾತ್ಮಕ ನಾಟಕ. ತಪ್ಪಿತಸ್ಥ ಎಂದು ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

"ನಾಲ್ಕು ತಿಂಗಳಿಂದ ನನ್ನ ಮೇಲೆ ಆರೋಪ ಮಾಡುತ್ತಾ ಬಂದಿದ್ದಾರೆ. ನನ್ನ ಬಂಧನಕ್ಕೆ ಒತ್ತಾಯಿಸಿ ಮಂಗಳವಾರ ಹರಿದ್ವಾರದಲ್ಲಿ ಜಮಾಯಿಸಿ ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ನನಗೆ ಅವರು ಬಯಸಿದ ಶಿಕ್ಷೆ ಆಗುವುದಿಲ್ಲ. ಇದು ಭಾವನಾತ್ಮಕ ನಾಟಕವಾಗಿದೆ, ನಿಮ್ಮ ಬಳಿ (ಕುಸ್ತಿಪಟುಗಳು) ಯಾವುದೇ ಸಾಕ್ಷ್ಯಗಳಿದ್ದರೆ, ಅದನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಮತ್ತು ನಾನು ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ಸಿದ್ಧನಿದ್ದೇನೆ" ಎಂದು ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:ಗಂಗಾನದಿಗೆ ಪದಕ ಸಮರ್ಪಿಸಲು ಹರಿದ್ವಾರ ತಲುಪಿದ ಕುಸ್ತಿಪಟುಗಳು: ನಿರ್ಧಾರ ಬದಲಿಸಿ ಸರ್ಕಾರಕ್ಕೆ ಐದು ದಿನಗಳ ಗಡುವು!

ABOUT THE AUTHOR

...view details