ನವದೆಹಲಿ:ಜನವರಿ 26 ರಂದು ಗಣರಾಜ್ಯೋತ್ಸವದ ದಿನದಂದು ರೈತರು ನಡೆಸಿದ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು 20 ಜನರ ಫೋಟೋಗಳನ್ನ ಬಿಡುಗಡೆ ಮಾಡಿದೆ. ಗಣರಾಜ್ಯೋತ್ಸವದ ದಿನ ಕೆಂಪುಕೋಟೆ ಮೇಲೆ ದಾಳಿ ಮಾಡಿದ ಉದ್ರಿಕ್ತ ಪ್ರತಿಭಟನಾಕಾರರ ಗುಂಪು, ರಾಷ್ಟ್ರಧ್ವಜ ಕಿತ್ತೆಸೆದು ತಮ್ಮದೇ ಧ್ವಜ ಹಾರಿಸಿದ್ದರು.
ಓದಿ: ದೆಹಲಿ ಹಿಂಸಾಚಾರ ಪ್ರಕರಣ: ಕೆಂಪುಕೋಟೆಯಲ್ಲಿ ಧಾರ್ಮಿಕ ಧ್ವಜ ಹಾರಿಸಿದ್ದ ಆರೋಪಿ ಅಂದರ್
ಪ್ರತಿಭಟನೆ ವೇಳೆ ಕೆಂಪುಕೋಟೆಗೆ ಭಾರಿ ಹಾನಿಯಾಗುವಂತೆ ಮಾಡಿದ್ದರು. ಈ ವೇಳೆ ನೂರಾರು ಪೊಲೀಸರು ಗಾಯಗೊಂಡಿದ್ದರು. ಬ್ಯಾರಿಕೇಡ್ಗಳನ್ನ ಕಿತ್ತೊಗೆದು ಉದ್ರಿಕ್ತರ ಗುಂಪು ಪುಂಡಾಟ ಮೆರೆದಿತ್ತು. ಈ ಸುದ್ದಿ ವಿಶ್ವದಾದ್ಯಂತ ಭಾರಿ ಸದ್ದು ಮಾಡಿತ್ತು. ಈ ನಡುವೆ ರೈತ ಸಂಘಟನೆಗಳು ಈ ದಾಳಿ ನಮ್ಮಿಂದಾದ ತಪ್ಪಲ್ಲ ಎಂದು ಸ್ಪಷ್ಟನೆ ನೀಡಿದ್ದವು.
ಈ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ಯುದ್ಧವೇ ನಡೆದಿತ್ತು. ಈ ನಡುವೆ ಪ್ರಕರಣದ ತನಿಖೆ ನಡೆಸಿರುವ ದೆಹಲಿ ಪೊಲೀಸರು ಅಂದು ಕೆಂಪುಕೋಟೆ ಮೇಲೆ ದಾಳಿ ನಡೆಸಿದ 20 ಮಂದಿಯ ಫೋಟೊಗಳನ್ನು ಇಂದು ರಿಲೀಸ್ ಮಾಡಿದೆ. ಈ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಸಾವಿರಾರು ರೈತರ ವಿರುದ್ಧ ಪ್ರಕರಣ ಕೂಡಾ ದಾಖಲಾಗಿದೆ. ಅಷ್ಟೇ ಅಲ್ಲ ರೈತ ಪ್ರತಿಭಟನೆ ನಾಯಕತ್ವ ವಹಿಸಿದ್ದ, ರಾಕೇಶ್ ಟಿಕಾಯತ್, ವಿ ಎಂ ಸಿಂಗ್, ಭಾನುಪ್ರತಾಪ್ ಸಿಂಗ್ ಸೇರಿದಂತೆ ಇತರರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.