ನವದೆಹಲಿ: ಕೃಷಿ ಕಾನೂನು ವಿರೋಧಿಸಿ ನವದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ಪರೇಡ್ ಹಿಂಸೆಗೆ ತಿರುಗಿದ ಪರಿಣಾಮ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ. ಘಟನೆ ಸಂಬಂಧ 4 ಎಫ್ಐಆರ್ ದಾಖಲಾಗಿವೆ. ಕೆಂಪುಕೋಟೆ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಪ್ರತಿಭಟನಾಕಾರರು ಕೆಂಪುಕೋಟೆಗೆ ಲಗ್ಗೆ ಇಟ್ಟು ಸಿಖ್ಖರ ಖಾಲ್ಸಾ ಬಾವುಟ ಹಾರಿಸಿದ್ದರು. ಈ ವೇಳೆ ಐತಿಹಾಸಿಕ ಸ್ಮಾರಕವಾದ ಕೆಂಪುಕೊಟೆಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಹೇಳಲಾಗಿದೆ. ಹಿಂಸಾತ್ಮಕ ರೂಪ ಪಡೆದ ಟ್ರ್ಯಾಕ್ಟರ್ ಪರೇಡ್ ಸಂಬಂಧ ದೆಹಲಿ ಪೊಲೀಸರು ನಾಲ್ಕು ಎಫ್ಐಆರ್ ದಾಖಲಿಸಿದ್ದಾರೆ.
ಸರ್ಕಾರಿ ಬಸ್ಗಳು, ಬಸ್ ನಿಲ್ದಾಣಗಳು, ಪೊಲೀಸ್ ವಾಹನಗಳು ಹಾಗೂ ಇತರ ವಾಹನಗಳಿಗೂ ಕಾರಣ ಹಾನಿ ಸಂಭವಿಸಿದೆ. ಪೊಲೀಸರು ಹಾಕಿದ ಬ್ಯಾರಿಕೇಡ್‌ಗಳನ್ನು ಮುರಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆ ವೇಳೆ 86 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೆಹಲಿಯ ಹಲವೆಡೆ ಹಾಗೂ ಹರಿಯಾಣದ ನಾಲ್ಕು ಜಿಲ್ಲೆಗಳಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ. ಅಲ್ಲದೆ ಪರೇಡ್ ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದರು. ಈ ವೇಳೆ ದೆಹಲಿಯಲ್ಲಿ ಪ್ಯಾರಾ ಮಿಲಿಟರಿ ನಿಯೋಜನೆ ಮಾಡುವಂತೆಯೂ ಅವರು ಆದೇಶ ಹೊರಡಿಸಿದ್ದರು.