ನವದೆಹಲಿ:ಚೀನಾ ಕಂಪನಿಗಳಿಂದ ಅಕ್ರಮವಾಗಿ ಹಣ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್ಕ್ಲಿಕ್ (Newsclick) ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಲ್ಲಿ ಇಂದು ದೆಹಲಿ ಪೊಲೀಸರು ದಾಳಿ ನಡೆಸಿದ್ದಾರೆ. ನ್ಯೂಸ್‌ಕ್ಲಿಕ್‌ನ ಕೆಲವು ಪತ್ರಕರ್ತರ ಮನೆ ಮೇಲೆ ದಾಳಿ ನಡೆಸಲಾಗಿದೆ. ಆದರೇ ಇದುವರೆಗೂ ಯಾವುದೇ ಬಂಧನವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಾಳಿ ವೇಳೆ ಪತ್ರಕರ್ತರ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ಗಳನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನ್ಯೂಸ್ಕ್ಲಿಕ್ ಸುದ್ಧಿ ಪೊರ್ಟಲ್ ಚೀನಾದಿಂದ ಹಣ ಪಡೆಯುತ್ತಿದೆ ಎಂಬ ಆರೋಪದ ಮೇರೆಗೆ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 406, 420 ಮತ್ತು 120-ಬಿ ಅಡಿ ನ್ಯೂಸ್ಕ್ಲಿಕ್ ವಿರುದ್ಧ ಹೊಸ ಪ್ರಕರಣ ದಾಖಲಿಸಿಕೊಂಡು ಮತ್ತೆ ತನಿಖೆ ಆರಂಭಿಸಿದ್ದಾರೆ. ಮತ್ತೊಂದೆಡೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತರಾಮ್ ಯಚೂರಿ ನಿವಾಸದ ಹಾಗೂ ಮುಂಬೈನ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ನಿವಾಸಗಳ ಮೇಲೂ ದಾಳಿ ಮಾಡಲಾಗಿದೆ.
ಈ ಬಗ್ಗೆ ಸೀತಾರಾಂ ಯೆಚೂರಿ ಮಾತನಾಡಿದ್ದು, "ನನ್ನೊಂದಿಗೆ ವಾಸಿಸುತ್ತಿರುವ ನನ್ನ ಸಹಚರರೊಬ್ಬರ ಮಗ ನ್ಯೂಸ್‌ಕ್ಲಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಪೊಲೀಸರು ಆತನನ್ನು ವಿಚಾರಿಸಲು ತಮ್ಮ ನಿವಾಸಕ್ಕೆ ಬಂದಿದ್ದಾರೆ. ಈ ವೇಳೆ ಆ ವ್ಯಕ್ತಿಗೆ ಸಂಬಂಧಿಸಿದ ಲ್ಯಾಪ್‌ಟಾಪ್ ಮತ್ತು ಫೋನ್ ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ 2021 ರಲ್ಲಿ, ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗವು ನ್ಯೂಸ್ಕ್ಲಿಕ್ ಪಡೆದ ಅಕ್ರಮ ಹಣದ ಬಗ್ಗೆ ಮೊಟ್ಟಮೊದಲ ಬಾರಿಗೆ ಪ್ರಕರಣ ದಾಖಲಿಸಿಕೊಂಡಿತ್ತು. ಚೀನಾ ಕಂಪನಿಗಳ ಮೂಲಕ ಅಕ್ರಮವಾಗಿ ಮಾಧ್ಯಮ ಸಂಸ್ಥೆ ಹಣ ಪಡೆದುಕೊಂಡಿದೆ ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿತ್ತು. ಇದಾದ ಬಳಿಕ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.
ಮಧ್ಯಂತರ ತಡೆ ತಂದಿದ್ದ ಸಂಪಾದಕರು:ಈ ನಡುವೆ ಆಗಸ್ಟ್ 22 ರಂದು ನ್ಯೂಸ್‌ಕ್ಲಿಕ್‌ನ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರು, ದೆಹಲಿ ಪೋಲೀಸ್ನ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ಸುದ್ದಿ ಮಾಧ್ಯಮ ಸಂಸ್ಥೆ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ಆದೇಶ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಪೊಲೀಸರ ಕ್ರಮದ ವಿರುದ್ಧ ಮಧ್ಯಂತರ ತಡೆ ಆದೇಶ ನೀಡುವಂತೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಜುಲೈ 7, 2021 ರಂದು ಮಧ್ಯಂತರ ಆದೇಶ ನೀಡಿತ್ತು. ಪ್ರಬೀರ್ ಪುರಕಾಯಸ್ಥ ಅವರನ್ನು ಬಂಧಿಸಬಾರದು. ಬದಲಿಗೆ ತನಿಖಾಧಿಕಾರಿಗಳಿಗೆ ಅಗತ್ಯವಿರುವಾಗ, ತನಿಖೆಗೆ ಸಹಕರಿಸಬೇಕು ಎಂದು ತಿಳಿಸಿ ಬಿಗ್ ರಿಲೀಫ್ ನೀಡಿತ್ತು.
ಅಮೆರಿಕದ ಬಿಲಿಯನೇರ್ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ಹಣ ಪಡೆಯುತ್ತಿರುವ ನ್ಯೂಸ್ಕ್ಲಿಕ್ ಜಾಗತಿಕ ನೆಟ್‌ವರ್ಕ್‌ನ ಒಂದು ಭಾಗವಾಗಿದೆ ಎಂದು ಅಮೆರಿಕದ ನ್ಯೂ ಯಾರ್ಕ್ ಟೈಮ್ಸ್ ಹೇಳಿತ್ತು. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ನ್ಯೂಸ್ಕ್ಲಿಕ್ ವಿದೇಶ ನಿಧಿಯನ್ನು ಪಡೆದಿದೆ. ಈ ನಿಧಿಯನ್ನು ದೇಶ ವಿರೋಧಿ ಚಟುವಟಿಕೆಗಳಿಗೂ ಬಳಸಲಾಗುತ್ತಿದೆ ಎಂದು ಇಡಿ ಆರೋಪಿಸಿತ್ತು. ಚೀನಾದಲ್ಲಿ ನೆಲೆಸಿರುವ ಉದ್ಯಮಿ ರಾಯ್ ಸಿಂಘಮ್ ಭಾರತದಲ್ಲಿ ಚೀನಾ ಬೆಂಬಲಿತ ಮಾಹಿತಿಗಳನ್ನು ಹಂಚಿಕೊಳ್ಳಲು ನ್ಯೂಸ್ಕ್ಲಿಕ್ಗೆ 38 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ನೀಡಿದ್ದಾರೆ ಎಂದು ಇಡಿ ಹೇಳಿತ್ತು. ಇದರ ಬೆನ್ನಲ್ಲೆ 2021ರಲ್ಲಿ ಇಡಿ ದಾಳಿ ನಡೆಸಿತ್ತು.
ಇದನ್ನೂ ಓದಿ:ಅಂದು ತುರ್ತು ಭೂಸ್ಪರ್ಶ ಮಾಡಿದ್ದ ಏರ್ ಇಂಡಿಯಾ ವಿಮಾನ ಇಂದು ತಾಂತ್ರಿಕ ದೋಷದ ನಿಮಿತ್ತ ರದ್ದು