ಕರ್ನಾಟಕ

karnataka

ETV Bharat / bharat

G20 Summit 2023: ರಾಷ್ಟ್ರರಾಜಧಾನಿಯಲ್ಲಿ ಭಾರಿ ಭದ್ರತೆ... ಟ್ರ್ಯಾಕ್ಟರ್​​ನಲ್ಲಿ ಗಸ್ತು ತಿರುಗುತ್ತಿರುವ ದೆಹಲಿ ಪೊಲೀಸರು - ಟ್ರ್ಯಾಕ್ಟರ್ ಸಹಾಯದಿಂದ ಗಸ್ತು

ಜಗತ್ತು ಒಂದೇ ಕುಟುಂಬ ಎಂಬ ಧ್ಯೇಯದೊಂದಿಗೆ ಸೆಪ್ಟೆಂಬರ್ 9 ರಿಂದ ನವದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಅದಕ್ಕಾಗಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಇಂಗ್ಲಂಡ್​ ಪ್ರಧಾನಿ ರಿಷಿ ಸುನಕ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೇರಿದಂತೆ ಹಲವು ವಿದೇಶಿ ಗಣ್ಯರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

Delhi Police patrols Raj Ghat area on tractor ahead of G20 Summit
Delhi Police patrols Raj Ghat area on tractor ahead of G20 Summit

By ETV Bharat Karnataka Team

Published : Sep 7, 2023, 4:45 PM IST

Updated : Sep 7, 2023, 6:33 PM IST

ನವದೆಹಲಿ: ಇದೇ ಸೆಪ್ಟೆಂಬರ್ 9 ರಿಂದ ನವದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಇಡೀ ದೇಶವೇ ಅತಿಥಿಗಳನ್ನು ಸ್ವಾಗತಿಸಲು ಸಜ್ಜಾಗುತ್ತಿದೆ. ದೇಶ - ವಿದೇಶಗಳಿಂದ ನೂರಾರು ಗಣ್ಯವ್ಯಕ್ತಿಗಳು ರಾಷ್ಟ್ರರಾಜಧಾನಿಗೆ ಆಗಮಿಸುತ್ತಿದ್ದು ಅವರೆಲ್ಲರ ಭದ್ರತೆ ಬಹಳ ಮುಖ್ಯ.

ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಭಾರೀ ಭದ್ರತೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ರಾಷ್ಟ್ರರಾಜಧಾನಿ ಸುತ್ತ-ಮುತ್ತ ಪೊಲೀಸ್​ ಸರ್ಪಗಾವಲು ಏರ್ಪಡಿಸಲಾಗಿದೆ. ಭದ್ರತಾ ದೃಷ್ಟಿಯಿಂದ ದೆಹಲಿ ಪೊಲೀಸರು ಗುರುವಾರ ರಾಜ್ ಘಾಟ್ ಪ್ರದೇಶದಲ್ಲಿ ಟ್ರ್ಯಾಕ್ಟರ್ ಸಹಾಯದಿಂದ ಗಸ್ತು ತಿರುಗುತ್ತಿರುವುದು ಸಹ ಕಂಡುಬಂದಿದೆ. ಪೊಲೀಸ್​ ಅಧಿಕಾರಿಯೊಬ್ಬರು ತಾವೇ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗುತ್ತಿರುವ ದೃಶ್ಯವನ್ನು ನಾವು ಕಾಣಬಹುದು.

ದೋಣಿಯಲ್ಲಿ ಗಸ್ತು: ಮತ್ತೊಂದೆಡೆ ದೆಹಲಿ ಪೊಲೀಸರು ಯಮುನಾ ನದಿಯಲ್ಲಿ ದೋಣಿ ಮೂಲಕವೂ ಗಸ್ತು ನಡೆಸುತ್ತಿದ್ದಾರೆ. ಕೆಲವು ಕಿಡಿಗೇಡಿಗಳು ಯಮುನಾ ನದಿ ಮೂಲಕ ನವದೆಹಲಿ ಪ್ರವೇಶಿಸಿ ಜಿ20 ಕಾರ್ಯಕ್ರಮಕ್ಕೆ ಅಡ್ಡಿಪಡಿಸಬಹುದು ಎಂಬ ಅನುಮಾನದ ಹಿನ್ನೆಲೆ ಯಮುನಾ ನದಿ ಉದ್ದಕ್ಕೂ ಭದ್ರತೆಯನ್ನು ಹೆಚ್ಚಿಸಿದ್ದಾರೆ.

''ಜಿ20 ಕಾರ್ಯಕ್ರಮ ನಡೆಯುವ ಸ್ಥಳದಿಂದ ಯಮುನಾ ನದಿ ಬಹಳ ಸಮೀಪವಿದೆ. ಯಮುನಾ ನದಿ ಮೂಲಕ ಕಾರ್ಯಕ್ರಮ ನಡೆಯುವ ಮುಖ್ಯದ್ವಾರಕ್ಕೆ ಸುಲಭವಾಗಿ ಬರಬಹುದು. ಕೆಲವು ಕಿಡಿಗೇಡಿಗಳು ಈ ಮೂಲಕ ಆಗಮಿಸಿ ತೊಂದರೆ ನೀಡಲು ಪ್ರಯತ್ನಿಸಬಹುದು. ಹಾಗಾಗಿ ಮುಂಜಾಗ್ರತವಾಗಿ ಗಸ್ತು ನಡೆಸಲಾಗುತ್ತಿದೆ. ಅಲ್ಲದೇ ನದಿಯ ಉದ್ದಕ್ಕೂ ನಡೆಯುವ ಪ್ರತಿಯೊಂದು ಚಟುವಟಿಕೆಯ ಮೇಲೆ ಕಣ್ಣಿಡಲು ಸೂಚನೆ ನೀಡಲಾಗಿದೆ'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಅತಿಥಿಗಳನ್ನು ಸ್ವಾಗತಿಸಲು ಭಾರತದ ರಾಜಧಾನಿ ದೆಹಲಿಯನ್ನು ಸಂಪೂರ್ಣವಾಗಿ ಅಲಂಕರಿಸಲಾಗಿದೆ. ಅತಿಥಿಗಳನ್ನು ಹೂವಿನೊಂದಿಗೆ ಸ್ವಾಗತಿಸಲು ವಿಶೇಷ ವ್ಯವಸ್ಥೆಯನ್ನೂ ಸಹ ಮಾಡಲಾಗುತ್ತಿದೆ. ಈ ದಿಸೆಯಲ್ಲಿ ಗಾಜಿಪುರ ಹೂವಿನ ಮಾರುಕಟ್ಟೆ ನೂರಾರು ಬಗೆಯ ಹೂವುಗಳಿಂದ ತುಂಬಿ ತುಳುಕುತ್ತಿದೆ. ಶೃಂಗಸಭೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದ್ದು ಇಂದಿನಿಂದಲೇ ಸಭೆಗೆ ಸಿದ್ಧತೆಗಳು ಭರದಿಂದ ಸಾಗಿವೆ.

ದೆಹಲಿ G20 ಶೃಂಗಸಭೆಗೆ ಸಿದ್ಧ

ಭಾರಿ ಭದ್ರತೆ:ಶೃಂಗಸಭೆ ಆರಂಭಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ರಸ್ತೆಗಳೆಲ್ಲ ಝಗಮಗಿಸುವ ವಿದ್ಯುದ್ದೀಪಗಳಿಂದ ಅಲಂಕಾರಗೊಳ್ಳುತ್ತಿವೆ. ಭದ್ರತಾ ದೃಷ್ಟಿಯಿಂದ ಹಲವು ರಸ್ತೆಗಳ ಮಾರ್ಗಗಳನ್ನು ಬದಲಿಸಲಾಗಿದೆ. ಭಾರಿ, ಮಧ್ಯಮ ಮತ್ತು ಲಘು ಸರಕುಗಳ ವಾಹನಗಳನ್ನು ಇಂದು ರಾತ್ರಿ 9 ರಿಂದ ದೆಹಲಿ ಪ್ರವೇಶಸದಂತೆ ಆದೇಶ ನೀಡಲಾಗಿದೆ. ಇಂದಿನಿಂದ ಭಾನುವಾರ ಮಧ್ಯರಾತ್ರಿಯವರೆಗೆ ಈ ನಿರ್ಬಂಧ ಇರಲಿದೆ.

ಹೆಚ್ಚುವರಿಯಾಗಿ, ಶನಿವಾರ ಬೆಳಗ್ಗೆ 5 ಗಂಟೆಯಿಂದ ಟ್ಯಾಕ್ಸಿ ಮತ್ತು ಆಟೋಗಳು ಸಹ ಇದೇ ರೀತಿಯ ನಿರ್ಬಂಧ ಎದುರಿಸಲಿವೆ. ಇಡೀ ಹೊಸ ದೆಹಲಿ ಜಿಲ್ಲೆಯನ್ನು ನಾಳೆ ಬೆಳಗ್ಗೆಯಿಂದ ಭಾನುವಾರದವರೆಗೆ "ನಿಯಂತ್ರಿತ ವಲಯ" ಎಂದು ಗೊತ್ತುಪಡಿಸಲಾಗಿದೆ. ಈ ವಲಯದೊಳಗೆ ಹೋಟೆಲ್‌, ಆಸ್ಪತ್ರೆ ಸೇರಿ ಕೆಲವೇ ಕೆಲವು ವಿಭಾಗಕ್ಕೆ ಸೇರಿದವರನ್ನು ಮಾತ್ರ ಇಂಡಿಯಾ ಗೇಟ್ ಮತ್ತು ಪ್ರಮುಖ ಪ್ರದೇಶಗಳಿಗೆ ಪ್ರಯಾಣಿಸಲು ಅನುಮತಿಸಲಾಗುತ್ತದೆ. ಸಭೆ ನಡೆಯುವ ಸುತ್ತಮುತ್ತ ಮಾನವರಹಿತ ವೈಮಾನಿಕ ವಾಹನ ಮತ್ತು ಡ್ರೋನ್‌ಗಳಿಗೂ ಸಹ ನಿರ್ಬಂಧ ಹೇರಲಾಗಿದೆ.

ನಗರದ ಸೌಂದರ್ಯ ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ಅಧಿಕಾರಿಗಳು ದೆಹಲಿಯ ವಿವಿಧ ಭಾಗಗಳಲ್ಲಿ ಸುಮಾರು 7 ಲಕ್ಷ ಹೂವಿನ ಗಿಡಗಳನ್ನು ನೆಡುವಂತಹ ಕ್ರಮಗಳನ್ನು ಕೈಗೊಂಡಿದ್ದಾರೆ. 15,000ಕ್ಕೂ ಹೆಚ್ಚು ಮೆಟ್ರಿಕ್ ಟನ್ ಘನತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. 100ಕ್ಕೂ ಹೆಚ್ಚು ಶಿಲ್ಪಗಳು ಮತ್ತು 150 ಕಾರಂಜಿಗಳನ್ನು ಇರಿಸಲಾಗಿದೆ. ಒಟ್ಟಿನಲ್ಲಿ ರಾಷ್ಟ್ರರಾಜಧಾನಿಯು ಎರಡು ದಿನಗಳ ಕಾಲ ಝಗಮಗಿಸುತ್ತಿದ್ದು, ಸಭೆಗೆ ಆಗಮಿಸುವ ವಿದೇಶಿಗರ ಮನ ಸೆಳೆಯಲಿದೆ.

ಪಾಕಿಸ್ತಾನದ ಧ್ವಜ ಪತ್ತೆ: ಸಭೆ ಆರಂಭಕ್ಕೆ ಎರಡು ದಿನಗಳು ಬಾಕಿ ಇದ್ದು ಇದಕ್ಕೂ ಮುನ್ನ ಉಧಂಪುರದಲ್ಲಿ ಹಸಿರು ಬಲೂನ್‌ಗಳಿಂದ ಕಟ್ಟಿದ ಪಾಕಿಸ್ತಾನದ ಧ್ವಜಯೊಂದು ಪತ್ತೆಯಾಗಿದೆ. ಜಂಡ್ ಕೆ. ರಾಮನಗರ ತೆಹಸಿಲ್‌ನ ಪಾಯಾಲಾ ಗ್ರಾಮದಲ್ಲಿ ಸ್ಥಳೀಯರು ಈ ಪಾಕ್ ಧ್ವಜ ಮತ್ತು ಬಲೂನ್‌ಗಳನ್ನು ಗುರುತಿಸಿದ್ದಾರೆ. ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪಾಕಿಸ್ತಾನದ ಧ್ವಜ ಮತ್ತು ಬಲೂನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಜಿ20 ಶೃಂಗಸಭೆ: 'ವಿಶ್ವವೇ ನಮ್ಮ ಕುಟುಂಬ' - ಜಗತ್ತಿಗೆ ಪ್ರಧಾನಿ ಮೋದಿ ಸಂದೇಶ

Last Updated : Sep 7, 2023, 6:33 PM IST

ABOUT THE AUTHOR

...view details