ನವದೆಹಲಿ:ನವದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಸಮೀಪ ಇಂದು ಸಂಜೆ ಸ್ಫೋಟ ಸಂಭವಿಸಿದೆ. ಈ ವಿಷಯ ತಿಳಿದ ತಕ್ಷಣವೇ ಅಪರಾಧ ವಿಭಾಗದ ಪೊಲೀಸರು ಮತ್ತು ವಿಧಿವಿಜ್ಞಾನ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಘಟನಾ ಸ್ಥಳದಲ್ಲಿ ಸ್ಫೋಟಕಗಳ ಅವಶೇಷಗಳು ಪತ್ತೆಯಾಗಿಲ್ಲ. ಆದರೂ, 'ರಾಸಾಯನಿಕ ಸ್ಫೋಟ'ದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ಚಾಣಕ್ಯಪುರಿ ಪ್ರದೇಶದಲ್ಲಿ ಇಸ್ರೇಲ್ ರಾಯಭಾರಿ ಕಚೇರಿ ಇದೆ. ಇಂದು ಸಂಜೆ 6 ಗಂಟೆಗೆ ದೆಹಲಿ ಅಗ್ನಿಶಾಮಕ ದಳವು ಈ ಸ್ಪೋಟದ ಕುರಿತು ಕರೆ ಸ್ವೀಕರಿಸಿದೆ. ಈ ಘಟನೆ ಸಮಯದಲ್ಲಿ ಕಚೇರಿಯ ಬಳಿಯಿದ್ದ ಭದ್ರತಾ ಸಿಬ್ಬಂದಿ, ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, "ಇಂದು ಸಂಜೆ 5 ಗಂಟೆಯ ಸುಮಾರಿಗೆ ನಾನು ಕರ್ತವ್ಯದಲ್ಲಿದ್ದಾಗ ದೊಡ್ಡ ಶಬ್ದ ಕೇಳಿತು. ಹೊರಬಂದಾಗ ಮರದ ಬಳಿ ಹೊಗೆ ಬರುತ್ತಿರುವುದನ್ನು ನೋಡಿದೆ. ಟೈರ್ ಸ್ಫೋಟಗೊಂಡ ಶಬ್ದದಂತೆಯೇ ಇತ್ತು. ಪೊಲೀಸರು ನನ್ನ ಹೇಳಿಕೆ ಪಡೆದುಕೊಂಡಿದ್ದಾರೆ'' ಎಂದರು.
ಇದೇ ವೇಳೆ, ಘಟನೆ ಕುರಿತು ಇಸ್ರೇಲ್ ರಾಯಭಾರಿ ಕಚೇರಿಯ ವಕ್ತಾರರು ಸ್ಪಷ್ಟನೆ ನೀಡಿದ್ದು, ''ಸಂಜೆ 5:10ರ ಸುಮಾರಿಗೆ ರಾಯಭಾರಿ ಕಚೇರಿಯ ಸಮೀಪದಲ್ಲಿ ಸ್ಫೋಟವೊಂದು ಸಂಭವಿಸಿದೆ ಎಂದು ನಾವು ದೃಢೀಕರಿಸಬಹುದು. ದೆಹಲಿ ಪೊಲೀಸರು ಮತ್ತು ಭದ್ರತಾ ತಂಡವು ಇನ್ನೂ ಪರಿಶೀಲನೆ ನಡೆಸುತ್ತಿದೆ. ನಮ್ಮ ಎಲ್ಲ ರಾಜತಾಂತ್ರಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ'' ಎಂದು ತಿಳಿಸಿದ್ದಾರೆ.
ಟೈಪ್ ಮಾಡಿದ ಪತ್ರ ಪತ್ತೆ:ಈ ಘಟನೆಯ ಸಮಯದಲ್ಲಿ ಟೈಪ್ ಮಾಡಿದ ಪತ್ರವೊಂದು ಪತ್ತೆಯಾಗಿದೆ. ಇಸ್ರೇಲ್ ರಾಯಭಾರಿಯನ್ನು ಉದ್ದೇಶಿಸಿ 'ನಿಂದನೀಯ' ಪದಗಳನ್ನು ಒಳಗೊಂಡಿರುವ ಈ ಪತ್ರವು ರಾಯಭಾರಿ ಕಚೇರಿ ಆವರಣದ ಹಿಂಭಾಗದ ಸ್ಫೋಟದ ಸ್ಥಳದ ಬಳಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರ ಬೆರಳಚ್ಚು ಪರೀಕ್ಷಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದು ಇಂಗ್ಲಿಷ್‌ನಲ್ಲಿ ಬರೆದ ಒಂದು ಪುಟದ ಪತ್ರ. ಇದು ಯಾವುದೋ ಸಂಘಟನೆಗೆ ಸಂಬಂಧಿಸಿದೆ ಎಂದು ಶಂಕಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಈ ಪ್ರದೇಶದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಲಾಯಿತು. ಮೂಲೆ-ಮೂಲೆಗಳಲ್ಲಿ ಶೋಧ ನಡೆಸಲಾಗಿದೆ. ಆದರೆ, ಸ್ಥಳದಲ್ಲಿ ಸುಟ್ಟ ಸ್ಫೋಟಕಗಳ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳದ (ಎನ್ಐಎ) ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ:ಆರ್‌ಬಿಐ ಮುಂಬೈ ಕಚೇರಿ, ಖಾಸಗಿ ಬ್ಯಾಂಕ್‌ಗಳಿಗೆ ಬಾಂಬ್ ಬೆದರಿಕೆ ಇಮೇಲ್
ಆರ್‌ಬಿಐ ಕಚೇರಿಗೆ ಬಾಂಬ್ ಬೆದರಿಕೆ: ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್‌ಬಿಐ) ಮುಂಬೈ ಕಚೇರಿ, ಖಾಸಗಿ ಬ್ಯಾಂಕ್‌ಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಕುರಿತು ಇ-ಮೇಲ್‌ಗೆ ಸಂದೇಶ ಬಂದಿದ್ದು, ''ಭಾರತದ ಇತಿಹಾಸದಲ್ಲೇ ಅತಿದೊಡ್ಡ ಹಗರಣ ಮಾಡಿರುವ ಆರ್‌ಬಿಐ ಸೇರಿದಂತೆ ಖಾಸಗಿ ಬ್ಯಾಂಕ್‌ಗಳಲ್ಲಿ ಬಾಂಬ್ ಇರಿಸಲಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಹಣಕಾಸು ಸಚಿವರು ತಕ್ಷಣ ರಾಜೀನಾಮೆ ನೀಡಬೇಕು. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಬೇಕು. ಅದೇ ರೀತಿ ಈ ಇಬ್ಬರು ಹಾಗೂ ಹಗರಣದಲ್ಲಿ ಭಾಗಿಯಾಗಿರುವ ಇತರರ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಮಧ್ಯಾಹ್ನ 1:30ರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, 11 ಬಾಂಬ್‌ಗಳನ್ನು ಒಂದರ ನಂತರ ಒಂದರಂತೆ ಸ್ಫೋಟಿಸಲಾಗುವುದು'' ಎಂಬ ಒಕ್ಕಣೆ ಬರೆದು ಇಮೇಲ್ ರವಾನಿಸಲಾಗಿದೆ.