ನವದೆಹಲಿ:ತಾರಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ, ಭಾರತ ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ(ಡಬ್ಲ್ಯುಎಫ್‌ಐ) ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಇಲ್ಲಿನ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಹೇಳಿಕೆ, ಡಿಜಿಟಲ್ ದಾಖಲೆಗಳುಳ್ಳ ಆರೋಪಪಟ್ಟಿ ಸಲ್ಲಿಸಿದ್ದಾರೆ.
ದೆಹಲಿ ಪೊಲೀಸರನ್ನು ಪ್ರತಿನಿಧಿಸುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ರೌಸ್ ಅವೆನ್ಯೂ ಕೋರ್ಟ್ನ ಎಸಿಎಂಎಂ ದೀಪಕ್ ಕುಮಾರ್ ಅವರು ಗಮನಿಸುತ್ತಿದ್ದಾರೆ. ಡಬ್ಲ್ಯುಎಫ್‌ಐ ಮಾಜಿ ಮುಖ್ಯಸ್ಥರ ವಿರುದ್ಧ ಐಪಿಸಿ ಸೆಕ್ಷನ್ 354, 354D, 354A ಅಡಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ರದ್ದತಿ ವರದಿಯೂ ಸಲ್ಲಿಕೆ:ಇದೇ ವೇಳೆ, ಸಂತ್ರಸ್ತೆ ಮತ್ತು ಆಕೆಯ ತಂದೆಯ ಹೇಳಿಕೆಯ ಆಧಾರದ ಮೇಲೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಇಲ್ಲಿನ ಪಟಿಯಾಲ ನ್ಯಾಯಾಲಯಕ್ಕೆ ರದ್ದತಿ ವರದಿಯನ್ನು ಸಲ್ಲಿಸಿದ್ದಾರೆ.
WFI ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ರದ್ದತಿ ವರದಿಯನ್ನು ಪಟಿಯಾಲ ಹೌಸ್ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಇದೇ ವೇಳೆ ಇದರ ಮುಂದಿನ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಲಾಗಿದೆ.