ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಆರೋಪಿ ನೀಲಂಗೆ ಎಫ್‌ಐಆರ್ ಪ್ರತಿಯನ್ನು ನೀಡುವಂತೆ ಪಟಿಯಾಲ ಕೋರ್ಟ್ ನೀಡಿದ ಆದೇಶವನ್ನು ದೆಹಲಿ ಪೊಲೀಸರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠದ ಮುಂದೆ ದೆಹಲಿ ಪೊಲೀಸರು ಈ ಬಗ್ಗೆ ಪ್ರಸ್ತಾಪಿಸಿದ್ದು, ಈ ಕುರಿತು ಹೈಕೋರ್ಟ್ ಇಂದು ಮಧ್ಯಾಹ್ನ ವಿಚಾರಣೆಗೆ ಆದೇಶಿಸಿದೆ.
ಡಿಸೆಂಬರ್ 21 ರಂದು ಪಟಿಯಾಲ ಹೌಸ್ ಕೋರ್ಟ್, ಈ ಪ್ರಕರಣದ ಆರೋಪಿ ನೀಲಂ ಅವರ ಕುಟುಂಬ ಸದಸ್ಯರಿಗೆ 24 ಗಂಟೆಗಳ ಒಳಗೆ ಎಫ್‌ಐಆರ್ ಪ್ರತಿಯನ್ನು ನೀಡುವಂತೆ ದೆಹಲಿ ಪೊಲೀಸರ ವಿಶೇಷ ಸೆಲ್‌ಗೆ ಸೂಚಿಸಿತ್ತು. ಪಟಿಯಾಲ ಹೌಸ್ ಕೋರ್ಟ್ನ ಈ ಆದೇಶವನ್ನು ದೆಹಲಿ ಪೊಲೀಸರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಪಟಿಯಾಲಾ ಹೌಸ್ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಆರೋಪಿ ನೀಲಂ ಪರ ವಕೀಲರು, ನ್ಯಾಯವಾದಿ ಮತ್ತು ಕುಟುಂಬದವರಿಗೆ ಭೇಟಿಯಾಗಲು ಅವಕಾಶ ನೀಡುವುದು ನಮ್ಮ ಕಾನೂನುಬದ್ಧ ಹಕ್ಕು. ಅಲ್ಲದೇ ಅವರ ವಿರುದ್ಧ ಯಾವ ಆರೋಪಗಳನ್ನು ದಾಖಲಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಕುಟುಂಬಕ್ಕೆ ಇದೆ. ಇದಕ್ಕಾಗಿ ಎಫ್‌ಐಆರ್‌ನ ಪ್ರತಿ ಕುಟುಂಬಕ್ಕೆ ನೀಡಬೇಕು ಎಂದು ನಿಲಂ ಪರ ವಕೀಲ ವಾದ ಮಂಡಿಸಿದ್ದರು.
ಇದನ್ನು ಆಲಿಸಿದ ನ್ಯಾಯಾಲಯ ತನ್ನ ಆದೇಶದಲ್ಲಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿರುವವರೆಗೆ ಕಾನೂನು ನೆರವು ಪಡೆಯಬಹುದಾಗಿದೆ. ಅಲ್ಲದೇ ಆರೋಪಿ ನೀಲಂ ತನ್ನ ಕುಟುಂಬ ಸದಸ್ಯರು ಮತ್ತು ವಕೀಲರನ್ನು ಪ್ರತಿದಿನ 15 ನಿಮಿಷಗಳ ಕಾಲ ಭೇಟಿಯಾಗಲೂ ನ್ಯಾಯಾಲಯ ಅವಕಾಶ ನೀಡಿ ಆದೇಶ ಮಾಡಿತ್ತು.