ನವದೆಹಲಿ: ಸಮುದಾಯವೊಂದರ ವಿರುದ್ಧ ದ್ವೇಷಪೂರಿತ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ 10 ನಾಯಕರ ವಿರುದ್ಧ ದೆಹಲಿಯ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (ಐಎಫ್ಎಸ್ಒ) ಘಟಕದ ಪೊಲೀಸರು ಎರಡು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ನೂಪುರ್ ಶರ್ಮಾ ಸೇರಿದಂತೆ, ನವೀನ್ ಜಿಂದಾಲ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಶಾಬಾದ್ ಚೌಹಾಣ್, ಮೌಲನಾ ಮುಫ್ತಿ ನದೀಮ್, ಅಬ್ದುರ್ ರೆಹಮನ್, ಗುಲ್ಜಾರ್ ಅನ್ಸಾರಿ, ಸ್ವಾಮಿ ಯತಿ ನರಸಿಂಹಾನಂದ ವಿರುದ್ಧ ಪ್ರಕರಣ ದಾಖಲಾಗಿದೆ.
'ದ್ವೇಷ ಸಂದೇಶಗಳನ್ನು ಹರಡುವ, ವಿವಿಧ ಗುಂಪುಗಳನ್ನು ಪ್ರಚೋದಿಸುವ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ಸನ್ನಿವೇಶಗಳನ್ನು ಸೃಷ್ಟಿಸುವವರ ವಿರುದ್ಧ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಅಲ್ಲದೇ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮತ್ತು ತಪ್ಪು ಸಂದೇಶಗಳಿಗೆ ಉತ್ತೇಜನ ಕೊಡುವ ಮತ್ತು ಅವುಗಳನ್ನು ಹರಡುವ ಹಿಂದಿನ ಪಾತ್ರದ ಕುರಿತೂ ತನಿಖೆ ಮಾಡಲಾಗುತ್ತದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆಗೂ ಕರೆಯುತ್ತೇವೆ: 'ನೂಪುರ್ ಶರ್ಮಾ ಹಾಗೂ ಓವೈಸಿ ಸೇರಿ ಇತರ ವಿರುದ್ಧ ಪ್ರತ್ಯೇಕ ಕೇಸ್ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ವಿಚಾರಣೆಗಾಗಿ ಸಾಮಾಜಿಕ ಜಾಲತಾಣಗಳ ಮಧ್ಯವರ್ತಿಗಳಿಗೆ ನೋಟಿಸ್ ಜಾರಿ ಮಾಡುತ್ತೇವೆ. ಎಲ್ಲ ಆರೋಪಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸುತ್ತೇನೆ. ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಾನ್ಪುರ ಹಿಂಸಾಚಾರ: ಪ್ರಮುಖ ಆರೋಪಿ ಖಾತೆಯಲ್ಲಿ ಕೋಟ್ಯಂತರ ರೂ. ವಹಿವಾಟು..ಬೆಚ್ಚಿಬಿದ್ದ ಅಧಿಕಾರಿಗಳು!