ನವದೆಹಲಿ:ಮಾಂಸ ವ್ಯಾಪಾರಿಗಳಿಬ್ಬರಿಗೆ ಮೂವರು ಪೊಲೀಸರು ಸೇರಿ ಒಟ್ಟು 7 ಜನ ಥಳಿಸಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಪ್ರಕರಣ ನವದೆಹಲಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಸಹಾಯಕ ಸಬ್ಇನ್ಸ್ಪೆಕ್ಟರ್ ಸೇರಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪೂರ್ವ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಘಟನೆಯ ಮಾಹಿತಿ ನೀಡಿದ್ದಾರೆ.
ವಿವರ: ಮಾರ್ಚ್ 7 ರಂದು ಮಾಂಸ ವ್ಯಾಪಾರಿಗಳಾದ ಮುಸ್ತಫಾಬಾದ್ ನಿವಾಸಿ ನವಾಬ್ ಹಾಗೂ ತಮ್ಮ ಸಂಬಂಧಿ ಶೋಯೆಬ್ ಕಾರಿನಲ್ಲಿ ಮನೆಗೆ ಹೊರಟಿದ್ದರು. ಆನಂದ್ ವಿಹಾರ್ ಬಳಿ ಸ್ಕೂಟರ್ವೊಂದಕ್ಕೆ ಇವರ ಕಾರು ಡಿಕ್ಕಿ ಹೊಡೆದಿದೆ. ಸ್ಕೂಟರ್ ಚಾಲಕ ನಷ್ಟ ಪರಿಹಾರವಾಗಿ ಮಾಂಸ ವ್ಯಾಪಾರಿಗಳಿಂದ 4,000 ರೂ. ಕೊಡುವಂತೆ ಆಗ್ರಹಿಸಿದ್ದಾನೆ. ಘಟನಾ ಸ್ಥಳಕ್ಕೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಜೊತೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಜೀಪ್‌ನಲ್ಲಿ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ನಂತರ ಪೊಲೀಸ್ ಕಾನ್ಸ್‌ಟೆಬಲ್‌ವೊಬ್ಬರು ಮಾಂಸ ವ್ಯಾಪಾರಿಗಳಿಂದ 2,500 ರೂಪಾಯಿ ಪಡೆದು ಸ್ಕೂಟರ್ ನಷ್ಟದ ಹಣವಾಗಿ ಚಾಲಕನಿಗೆ ಕೊಟ್ಟಿದ್ದಾರೆ. ಕಾರಿನಲ್ಲಿ ಮಾಂಸ ಸಾಗಾಟ ಮಾಡುತ್ತಿದ್ದ ಕಾರಣ 15 ಸಾವಿರ ರೂ. ಕೊಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದಾರೆ. ಹಣ ನೀಡದೇ ಇದ್ದರೆ ಠಾಣೆಗೆ ಕರೆದುಕೊಂಡು ಹೋಗುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ದುಡ್ಡು ಕೊಡಲು ವ್ಯಾಪಾರಿಗಳು ನಿರಾಕರಿಸಿದಾಗ ಇತರೆ ನಾಲ್ಕು ಜನರನ್ನು ಕರೆದು ಇಬ್ಬರು ವ್ಯಾಪಾರಿಗಳನ್ನು ಪೊಲೀಸರು ತಮ್ಮೊಂದಿಗೆ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದಿದ್ದಾರೆ. ನವಾಬ್ ಮತ್ತು ಶೋಯೆಬ್ ಇಬ್ಬರನ್ನು ಥಳಿಸಿ, ಇಬ್ಬರ ಕೈಗಳಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ನಂತರ ಪೊಲೀಸರು ವ್ಯಾಪಾರಿಗಳಿಗೆ ಮತ್ತಿನ ಚುಚ್ಚು ಮದ್ದು ನೀಡಿ 25 ಸಾವಿರ ರಪಾಯಿ ಪಡೆದು ಖಾಲಿ ಕಾಗದದ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದರು.
ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ನಾಲ್ಕು ದಿನಗಳ ನಂತರ ಎಫ್‌ಐಆರ್ ದಾಖಲಾಗಿದೆ. ಎಲ್ಲ 7 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸೇರಿ ಮೂವರನ್ನೂ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಮಾಂಸ ವ್ಯಾಪಾರಿಗಳಿಗೆ ಗಾಯಗಳಾಗಿದ್ದು, ಅವರನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಮಾರ್ಚ್ 10 ರಂದು ಸುಲಿಗೆ ಮತ್ತು ಉದ್ದೇಶಪೂರ್ವಕ ನೋವುಂಟು ಮಾಡಿದ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಆರೋಪಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ:ದೂರು ದಾಖಲಿಸಲು ಹೋದ ದಿವ್ಯಾಂಗನ ಮೇಲೆ ಪೊಲೀಸರಿಂದ ಹಲ್ಲೆ ಆರೋಪ.. ಮೂವರು ಸಿಬ್ಬಂದಿ ಅಮಾನತು