ಕರ್ನಾಟಕ

karnataka

ETV Bharat / bharat

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೇಳಿಕೆ: ರಾಹುಲ್ ನಿವಾಸಕ್ಕೆ ದೆಹಲಿ ಪೊಲೀಸರ ಭೇಟಿ - ಈಟಿವಿ ಭಾರತ ಕನ್ನಡ

ಲೈಂಗಿಕ ದೌರ್ಜನ್ಯ ಹೇಳಿಕೆ ವಿಚಾರವಾಗಿ ಮಾಹಿತಿ ಪಡೆಯಲು ಇಂದು ದೆಹಲಿಯ ರಾಹುಲ್​ ಗಾಂಧಿ ನಿವಾಸಕ್ಕೆ ದೆಹಲಿ ಪೊಲೀಸರು ಭೇಟಿ ನೀಡಿದ್ದರು.

Delhi Police at Rahul Gandhis doorstep over women being sexually assaulted remark
'ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ' ಹೇಳಿಕೆ : ರಾಹುಲ್ ಗಾಂಧಿ ನಿವಾಸಕ್ಕೆ ದೆಹಲಿ ಪೊಲೀಸರು

By

Published : Mar 19, 2023, 1:11 PM IST

ನವದೆಹಲಿ : ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ನಿವಾಸಕ್ಕೆ ಇಂದು ದೆಹಲಿ ಪೊಲೀಸರು ಭೇಟಿ ನೀಡಿದ್ದಾರೆ. ಈ ಹಿಂದೆ ಶ್ರೀನಗರದಲ್ಲಿ ಹಮ್ಮಿಕೊಂಡಿದ್ದ ಭಾರತ ಜೋಡೋ ಯಾತ್ರೆಯ ವೇಳೆ 'ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ' ಎಂಬ ವಿವಾದಿತ ಹೇಳಿಕೆ ನೀಡಿದ್ದರು. ಈ ಸಂಬಂಧ ಕಳೆದ ಗುರುವಾರ ಪೊಲೀಸರು ನೋಟಿಸ್​ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ರಾಹುಲ್​ ಮನೆಗೆ ತೆರಳಿದ ಪೊಲೀಸರು ಸ್ಪಷ್ಟನೆ ಕೇಳಿದ್ದಾರೆ.

ದೆಹಲಿ ಕಾನೂನು ಸುವ್ಯವಸ್ಥೆ ವಿಭಾಗದ ವಿಶೇಷ ಪೊಲೀಸ್ ಆಯುಕ್ತರಾದ ಸಾಗರ್ ಪ್ರೀತ್ ಹೂಡಾ ನೇತೃತ್ವದ ಪೊಲೀಸ್ ತಂಡವು ರಾಹುಲ್​​ ಅವರ ತುಘಲಕ್ ಲೇನ್ ನಿವಾಸಕ್ಕೆ ಆಗಮಿಸಿತ್ತು. ಪೊಲೀಸರು ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳನ್ನು ಗಮನದಲ್ಲಿಟ್ಟುಕೊಂಡು ರಾಹುಲ್​ ಗಾಂಧಿಗೆ ಪ್ರಶ್ನಾವಳಿಗಳನ್ನು ಒದಗಿಸಿದ್ದಾರೆ. ಇದರ ಜೊತೆಗೆ ಲೈಂಗಿಕ ಕಿರುಕುಳದ ಬಗ್ಗೆ ಸಂಪರ್ಕಿಸಿದ ಮಹಿಳೆಯರ ವಿವರಗಳನ್ನೂ ನೀಡುವಂತೆ ಕೇಳಿದ್ದಾರೆ. ಈ ಮೂಲಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಕ್ಷಣೆ ನೀಡಲು ಸಹಕಾರಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಶೇಷ ಪೊಲೀಸ್​ ಆಯುಕ್ತ ಸಾಗರ್​ ಪ್ರೀತ್​ ಹೂಡಾ, "ನಾವು ರಾಹುಲ್​ ಗಾಂಧಿ ಅವರೊಂದಿಗೆ ಮಾತನಾಡಲು ಇಲ್ಲಿಗೆ ಬಂದಿದ್ದೇವೆ. ಅವರು ಕಳೆದ ಜನವರಿ 30ರಂದು ಶ್ರೀನಗರದಲ್ಲಿ ನಡೆದ ಭಾರತ ಜೋಡೋ ಯಾತ್ರೆಯಲ್ಲಿ ಈ ಹೇಳಿಕೆ ನೀಡಿದ್ದರು. ಯಾತ್ರೆಯ ಸಂದರ್ಭದಲ್ಲಿ ಹಲವಾರು ಮಹಿಳೆಯರನ್ನು ಭೇಟಿಯಾಗಿದ್ದು, ಅತ್ಯಾಚಾರಕ್ಕೊಳಗಾಗಿರುವ ಬಗ್ಗೆ ಹೇಳಿಕೊಂಡಿರುವುದಾಗಿ ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಪಡೆಯಲು ಬಂದಿದ್ದೇವೆ. ಅವರಿಂದ ಅತ್ಯಾಚಾರ ಸಂತ್ರಸ್ತರ ಮಾಹಿತಿ ಪಡೆದು, ರಕ್ಷಣೆ ಮತ್ತು ನ್ಯಾಯ ಒದಗಿಸಲು ಇದು ಸಹಕಾರಿಯಾಗುತ್ತದೆ" ಎಂದು ಹೇಳಿದರು.

ಅದಾನಿ, ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ:ರಾಹುಲ್​ ಗಾಂಧಿ ತಮ್ಮ ಹೇಳಿಕೆಯಿಂದ ಮತ್ತೆ ಮತ್ತೆ ಟೀಕೆಗೆ ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ ಲಂಡನ್​ನಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿ ದೇಶಾದ್ಯಂತ ಕ್ಷಮೆ ಯಾಚಿಸುವಂತೆ ಒತ್ತಾಯ ಕೇಳಿಬಂದಿತ್ತು.

ಉದ್ಯಮಿ ಗೌತಮ್ ಅದಾನಿ, ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಸಾಕಷ್ಟು ವಾಗ್ದಾಳಿ ನಡೆಸಿದ್ದರು. ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿ ಟೀಕಿಸಿದ್ದ ಅವರು ಮೋದಿಯವರ ವಿದೇಶ ಪ್ರವಾಸದ ನಂತರ ಅದಾನಿ ಗ್ರೂಪ್ ವಿದೇಶಿ ರಾಷ್ಟ್ರಗಳಿಂದ ಒಪ್ಪಂದಗಳನ್ನು ಪಡೆದುಕೊಂಡಿರುವುದಾಗಿ ಆರೋಪಿಸಿದ್ದರು. ಅಲ್ಲದೇ ಹಲವು ಬಾರಿ ಪ್ರಧಾನ ಮಂತ್ರಿ ಮೋದಿ ಅದಾನಿ ಜೊತೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದರು ಎಂದೂ ಆರೋಪಿಸಿದ್ದರು.

ಇದನ್ನೂ ಓದಿ:ದೇಶದ ಪ್ರಜಾಪ್ರಭುತ್ವದ ಯಶಸ್ಸು ಕೆಲವರಿಗೆ ನೋವುಂಟು ಮಾಡಿದೆ: ಪ್ರಧಾನಿ ಮೋದಿ ವಾಗ್ದಾಳಿ

ABOUT THE AUTHOR

...view details