ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಿಂದ ಅಚ್ಚರಿ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ರಾಖಿ ಕಟ್ಟಲು ಸಹೋದರನಿಗಾಗಿ ಪೋಷಕರಿಗೆ ಬೇಡಿಕೆ ಇಟ್ಟಿದ್ದಾಳೆ. ಮಗಳ ಈ ಬೇಡಿಕೆ ಈಡೇರಿಸಲು ದಂಪತಿಯೊಬ್ಬರು ರಸ್ತೆ ಪಕ್ಕದಲ್ಲಿ ಮಲಗಿದ್ದ ಪುಟ್ಟ ಮಗುವನ್ನು ಅಪಹರಿಸಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮಗು ಅಪಹರಿಸಿದ ಆರೋಪಿಗಳನ್ನು ಇಲ್ಲಿನ ಟ್ಯಾಗೋರ್ ಗಾರ್ಡನ್‌ನ ರಘುಬೀರ್ ನಗರದ ನಿವಾಸಿಗಳಾದ ಸಂಜಯ್ ಗುಪ್ತಾ ಹಾಗೂ ಅನಿತಾ ಗುಪ್ತಾ ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಆಗಸ್ಟ್ 23ರಂದು ರಾತ್ರಿ ಪುಟ್ಟ ಮಗುವನ್ನು ಈ ದಂಪತಿ ಅಪಹರಣ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫುಟ್‌ಪಾತ್‌ನಿಂದ ಮಗು ಅಪಹರಣ: ಇಲ್ಲಿನ ಚಟ್ಟಾ ರೈಲ್ ಚೌಕ್‌ನ ಫುಟ್‌ಪಾತ್‌ನಲ್ಲಿ ಆಗಸ್ಟ್ 23ರಂದು ರಾತ್ರಿ ದೀಪಕ್ ಎಂಬುವವರು ತನ್ನ ಪತ್ನಿ ರಾಮಶೀಲಾ, 2 ವರ್ಷದ ಮಗಳು ಮತ್ತು ಒಂದು ತಿಂಗಳ ಮಗನೊಂದಿಗೆ ಮಲಗಿದ್ದರು. ಬೆಳಗ್ಗೆ 6 ಗಂಟೆಗೆ ಎಚ್ಚರವಾಗಿ ನೋಡಿದಾಗ ಮಗು ಕಾಣೆಯಾಗಿರುವುದು ಗೊತ್ತಾಗಿದೆ. ಹೀಗಾಗಿ ಮೊದಲು ಸುತ್ತಮುತ್ತಲ ಪ್ರದೇಶದಲ್ಲಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೂ ಮಗು ಸಿಗದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಘಟನೆಯ ಬಗ್ಗೆ ದೂರು ನೀಡಿದ್ದರು ಎಂದು ದೆಹಲಿ ಉತ್ತರ ಜಿಲ್ಲೆಯ ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ.
400ಕ್ಕೂ ಹೆಚ್ಚು ಸಿಸಿಟಿವಿಗಳ ಪರಿಶೀಲನೆ: ದೀಪಕ್ ದಂಪತಿ ತಮ್ಮ ಮಗು ಕಾಣೆಯಾದ ಬಗ್ಗೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಇದರ ಭಾಗವಾಗಿ ಮಗು ಪತ್ತೆಗಾಗಿ ಪೊಲೀಸರು ಸುತ್ತಮುತ್ತಲಿನ ಇಡೀ ಪ್ರದೇಶದಲ್ಲಿ ಅಳವಡಿಸಿದ್ದ ಸುಮಾರು 400 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಮಗು ನಾಪತ್ತೆಯಾದ ಪ್ರದೇಶದಲ್ಲಿ ಬೈಕ್ ಮೇಲೆ ಇಬ್ಬರು ತಿರುಗಾಡುತ್ತಿರುವುದು ಕಂಡು ಬಂದಿದೆ.