ನವದೆಹಲಿ: ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶದ ನಾಗರಿಕ ಸೇವೆಗಳ ಮೇಲೆ ಕೇಂದ್ರ ಸರ್ಕಾರ ತನ್ನ ಹಿಡಿತ ಸಾಧಿಸಲು ಹೊರಡಿಸಿರುವ ಸುಗ್ರೀವಾಜ್ಞೆ ವಿರುದ್ಧ ದೆಹಲಿ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ವಿಚಾರಣೆಗೆ ಒಳಪಡಿಸಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, 2018 ರಲ್ಲಿ ಮತ್ತು ಮೇ 11, 2023 ರಂದು ನೀಡಲಾದ ಸಂವಿಧಾನ ಪೀಠದ ತೀರ್ಪುಗಳು, ಆರ್ಟಿಕಲ್ 239 ಎಎ (7) ರ ಅಡಿ ಕರಡು ರಚನೆಗೆ ಅಧಿಕಾರ ಇದೆಯೇ ಎನ್ನುವ ಅಂಶವನ್ನು ಪರಿಗಣಿಸಿಲ್ಲ ಎಂದು ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಪೀಠವು ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿದೆ.
ಮೊದಲ ಬಾರಿಗೆ ದೆಹಲಿ ಸರ್ಕಾರದ ವ್ಯಾಪ್ತಿಯಿಂದ ಹೊರಗಿರುವ ಸೇವೆಗಳನ್ನು ತೆಗೆದುಕೊಳ್ಳಲು ಕೇಂದ್ರವು 239ಎಎ ವಿಧಿ 7 ರ ಅಡಿ ನೀಡಲಾದ ಅಧಿಕಾರವನ್ನು ಬಳಸಿದೆ ಎಂಬುದನ್ನು ಗಮನಿಸಿದೆ. ಆ ರೀತಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ಅನುಮತಿ ಇದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲನೆ ಮಾಡಬೇಕಿದೆ ಎಂದು ಹೇಳಿದ ಪೀಠವು, ಸುಗ್ರೀವಾಜ್ಞೆ ವಿರುದ್ಧದ ಅರ್ಜಿಯನ್ನು ಸಾಂವಿಧಾನಿಕ ಪೀಠ ವಿಚಾರಣೆ ನಡೆಸಬಹುದು ಎಂದು ಸೂಚಿಸಿತು.
ಸಂಸತ್ತಿನ ಪ್ರಕ್ರಿಯೆ ನಂತರ ಸುಗ್ರೀವಾಜ್ಞೆಯನ್ನು ಬೇರೆ ರೂಪದಲ್ಲಿ ಅಂಗೀಕರಿಸುವ ಸಾಧ್ಯತೆಯಿದೆ. ಆದ್ದರಿಂದ ಜುಲೈ 20 ರಂದು ಪ್ರಾರಂಭವಾಗುವ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯ ಮುಂದೆ ಸುಗ್ರೀವಾಜ್ಞೆಯನ್ನು ಮಸೂದೆ ಮಂಡಿಸುವ ಮೂಲಕ ಉಭಯ ಸದನಗಳ ಒಪ್ಪಿಗೆ ಪಡೆಯಲಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡುವಂತೆ ಕೇಂದ್ರದ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠವನ್ನು ಒತ್ತಾಯಿಸಿದರು.