ನವದೆಹಲಿ: ಬಾಲಕಿಯನ್ನು ಅಪಹರಿಸಿದ ದುರುಳರು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ನವದೆಹಲಿಯಲ್ಲಿ ನಡೆದಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗೆ ಬಲೆ ಬೀಸಿದ್ದಾರೆ.
ಏಪ್ರಿಲ್ 24ರ ಸಂಜೆ 5 ಗಂಟೆಯ ಸುಮಾರಿಗೆ ತರಕಾರಿ ತರಲೆಂದು ಮಾರುಕಟ್ಟೆಗೆ ತೆರಳಿದ್ದ ಬಾಲಕಿ ವಾಪಸ್ ಮನೆಗೆ ಬಂದಿರಲಿಲ್ಲ. ಸ್ನೇಹಿತರು ಅಥವಾ ಸಂಬಂಧಿಕರ ಮನೆಗೆ ತೆರಳಿರಬಹುದೆಂದು ಪೋಷಕರು ಭಾವಿಸಿದ್ದರು. ಆದರೆ ಎರಡು ದಿನಗಳು ಕಳೆದರೂ ಮಗಳು ಮನೆಗೆ ಬಾರದಿದ್ದರಿಂದ ಆಘಾತಗೊಂಡು ಏಪ್ರಿಲ್ 26ರಂದು ಪೊಲೀಸರಿಗೆ ದೂರು ನೀಡಿದ್ದರು.
ಮೇ 1ರಂದು ದಕ್ಷಿಣ ದೆಹಲಿಯಲ್ಲಿ ಬಾಲಕಿಯನ್ನು ಕರೆದೊಯ್ದಿದ್ದ ಆರೋಪಿ ಬಗ್ಗೆ ಮಾಹಿತಿದಾರರಿಂದ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಆತನನ್ನು ಬಂಧಿಸಿದ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅಪಹರಣದಿಂದ ಹಿಡಿದು ಪ್ರತಿ ಸಂಗತಿಯನ್ನೂ ಆತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ದಲಿತ ವಿವಾಹಿತೆಯ ಬೆತ್ತಲೆಗೊಳಿಸಿ ಸಾಮೂಹಿಕ ಅತ್ಯಾಚಾರ ಯತ್ನ!
ತರಕಾರಿ ಖರೀದಿಸಲೆಂದು ಬಾಲಕಿ ತನ್ನ ಮನೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಶನಿ ಬಜಾರ್‌ಗೆ ತೆರಳಲು ಆಟೋ ಹತ್ತಿದ್ದಾಳೆ. ಆಟೋ ಚಾಲಕ ಆಕೆಯನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಬದಲು ಓಖ್ಲಾ ಎಂಬಲ್ಲಿಗೆ ಕರೆದೊಯ್ದಿದ್ದಾನೆ. ಇದೇ ಸಂದರ್ಭದಲ್ಲಿ ಓಖ್ಲಾಗೆ ಬರುವಂತೆ ಇಬ್ಬರು ಸ್ನೇಹಿತರಿಗೆ ಫೋನ್ ಮಾಡಿದ್ದಾನೆ. ಈ ದುರುಳರು ಆಟೋದಲ್ಲಿದ್ದ ಬಾಲಕಿಗೆ ಮತ್ತು ಬರುವ ಔಷಧಮಿಶ್ರಿತ ತಂಪು ಪಾನೀಯ ಕುಡಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಆರೋಪಿ ಶಾರುಖ್ ಹೇಳಿದ್ದಾನೆ.
ಮಂಪರಿನಲ್ಲಿದ್ದ ಬಾಲಕಿಯನ್ನು ಟಿಗ್ರಿಯ ಜೆಜೆ ಕ್ಯಾಂಪ್ ಎಂಬಲ್ಲಿಗೆ ಮತ್ತೊಬ್ಬ ಗೆಳೆಯ ಸಲ್ಮಾನ್ ಚೆಸ್ಸಿ ಕರೆದೊಯ್ದಿದ್ದಾನೆ. ಬಳಿಕ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮರುದಿನ ಬೆಳಗ್ಗೆ ಆಕೆಯನ್ನು ಮಥುರಾದ ಕೋಸಿ ಕಲಾನ್‌ಗೆ ಕರೆದೊಯ್ದು ಅಲ್ಲಿಯೂ ಆಕೆಯನ್ನು ಒಂದು ದಿನ ಇಟ್ಟುಕೊಂಡಿದ್ದಾರೆ. ಮತ್ತೆ ಮರುದಿನ ಆಕೆಯನ್ನು ದೆಹಲಿಗೆ ಕರೆತಂದು ಟಿಗ್ರಿ ಪ್ರದೇಶದಲ್ಲಿ ಬಿಟ್ಟಿರುವ ಕುರಿತು ವಿಚಾರಣೆ ವೇಳೆ ಆರೋಪಿ ವಿವರಿಸಿದ್ದಾನೆ.
ಮರುದಿನ ಪೋಸ್ಟರ್‌ನಲ್ಲಿ ಕಾಣೆಯಾಗಿರುವ ಬಾಲಕಿಯನ್ನು ಸಾಕೆತ್ ಮೆಟ್ರೋ ನಿಲ್ದಾಣದ ಬಳಿ ನೋಡಿದ್ದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋದಾಗ ಬಾಲಕಿ ಮಂಪರು ಸ್ಥಿತಿಯಲ್ಲಿದ್ದಳು. ಸಂತ್ರಸ್ತೆಯನ್ನು ಏಮ್ಸ್ ಆಸ್ಪತ್ರೆಗೆ ಪರೀಕ್ಷೆಗೆ ಒಳಪಡಿಸಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಪ್ರಕರಣ ಸಂಬಂಧ ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಮೋಹಿತ್ (20), ಆಕಾಶ್ (19), ಶಾರೂಖ್ (20) ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇತರ ಆರೋಪಿಗಳ ಗುರುತು ಪತ್ತೆ ಹಚ್ಚಲು ಮತ್ತು ಬಂಧಿಸಲು ತನಿಖೆ ಕೈಗೊಳ್ಳಲಾಗಿದೆ. ಆರೋಪಿಯು ಬಾಲಕಿಯೊಂದಿಗೆ ಪ್ರಯಾಣಿಸಿದ ಆಟೋ ಪತ್ತೆ ಹಚ್ಚಲಾಗುತ್ತಿದೆ ಎಂದು ಡಿಸಿಪಿ ಬೆನಿತಾ ಮೇರಿ ಜೈಕರ್ ತಿಳಿಸಿದರು.