ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನ ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಆರೋಪ ಹಿನ್ನೆಲೆಯಲ್ಲಿ ಸುಮಾರು 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ವಶಕ್ಕೆ ಪಡೆದುಕೊಂಡಿತ್ತು.
ಇವರ ವಿರುದ್ಧ ಜಾರಿ ನಿರ್ದೇಶನಾಲಯ ಐಪಿಸಿ ಸೆಕ್ಷನ್ 109 ಮತ್ತು ಸೆಕ್ಷನ್ 13(2)ರ ಅಡಿ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಪ್ರಾರಂಭ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಬಂಧನ ಮಾಡಿದೆ.
ಇದನ್ನೂ ಓದಿ:ಹಿಜಾಬ್ ಧರಿಸಿ ನೃತ್ಯ ಮಾಡಿದ ಯುವಕರು: ಮುಸ್ಲಿಂ ಮುಖಂಡರ ಆಕ್ಷೇಪ, ಖಂಡನೆ
ಕಳೆದ ಕೆಲ ತಿಂಗಳ ಹಿಂದೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಅವರ ಕುಟುಂಬ ಮತ್ತು ಕಂಪನಿಗಳಿಗೆ ಸಂಬಂಧಿಸಿದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿತ್ತು. ಈ ವೇಳೆ, ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿತ್ತು. 2015-2016ರಲ್ಲಿ ಜೈನ್ ಸಾರ್ವಜನಿಕ ಸೇವಕರಾಗಿದ್ದಾಗ ಅವರ ಒಡೆತನದ ಮತ್ತು ನಿಯಂತ್ರಣದಲ್ಲಿರುವ ಕಂಪನಿಗಳು ಹವಾಲಾ ಜಾಲದ ಮೂಲಕ ಶೆಲ್ ಕಂಪನಿಗಳಿಂದ 4.81 ಕೋಟಿ ರೂ.ವರೆಗೆ ಪಡೆದಿದ್ದವು ಎಂದು ಹಣಕಾಸು ತನಿಖಾ ಸಂಸ್ಥೆಯ ತನಿಖೆಯಿಂದ ತಿಳಿದುಬಂದಿದೆ.