ನವದೆಹಲಿ: ದೆಹಲಿ ಪೊಲೀಸರ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (ಐಎಫ್‌ಎಸ್‌ಒ) ಘಟಕದ ಅಧಿಕಾರಿಗಳು ನಡೆಸಿದ ಸಮಗ್ರ ತನಿಖೆಯಲ್ಲಿ ದೆಹಲಿ ಮೂಲದ ವ್ಯಕ್ತಿಯೊಬ್ಬರ 30 ಲಕ್ಷ ರೂಪಾಯಿ ಮೌಲ್ಯದ (ಪ್ರಸ್ತುತ ಮೌಲ್ಯ 4.5 ಕೋಟಿ ರೂಪಾಯಿ) ಕ್ರಿಪ್ಟೋ ಕರೆನ್ಸಿ ವ್ಯಾಲೆಟ್ ಅನ್ನು ಖದೀಮರು ಕದ್ದಿದ್ದಾರೆ. ಈ ವ್ಯಾಲೆಟ್ನಲ್ಲಿ ಇದ್ದ ಮೂರು ವಿದೇಶಿ ಖಾತೆಗಳಿಗೆ ಕರೆನ್ಸಿ ವರ್ಗಾಯಿಸಿದ್ದಾರೆ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ ಮಲ್ಹೋತ್ರಾ, ದೆಹಲಿ ಮೂಲದ ವ್ಯಕ್ತಿಯೊಬ್ಬರು 2019 ರಲ್ಲಿ 30,85,845 ರೂಪಾಯಿ ಮೌಲ್ಯದ ಬಿಟ್‌ಕಾಯಿನ್‌ಗಳು, ಎಥೆರಮ್ ಮತ್ತು ಬಿಟ್‌ಕಾಯಿನ್ ಹಣ ಕಳೆದುಕೊಂಡ ನಂತರ ಪಶ್ಚಿಮ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಪ್ರಕರಣದ ತನಿಖೆಯನ್ನು ದೆಹಲಿಯ ವಿಶೇಷ ದಳದ ಸೈಬರ್ ಕ್ರೈಂ ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು.
ತನಿಖೆಯ ಸಂದರ್ಭದಲ್ಲಿ ಕ್ರಿಪ್ಟೋ ಕರೆನ್ಸಿ ಜಾಡು ಆಶ್ಚರ್ಯ ಮೂಡಿಸಿದೆ. ಕ್ರಿಪ್ಟೋ ಕರೆನ್ಸಿ ಪ್ಯಾಲೇಸ್ಟಿನಿಯನ್ ಸಂಘಟನೆ ಹಮಾಸ್‌ನ ಮಿಲಿಟರಿ ವಿಭಾಗವಾದ ಅಲ್ - ಕಸ್ಸಾಮ್ ಬ್ರಿಗೇಡ್‌ಗಳು ನಿರ್ವಹಿಸುತ್ತಿದ್ದ ಮೂರು ವಿದೇಶಿ ಖಾತೆಗೆ ವರ್ಗಾವಣೆಗೊಂಡಿದೆ. ಒಂದು ಖಾತೆ ಈಜಿಪ್ಟ್ ನಿವಾಸಿ ಅಹ್ಮದ್ ಮರ್ಜೂಕ್ ಅವರದ್ದಾಗಿದ್ದು, ಮತ್ತೊಂದು ಪ್ಯಾಲೆಸ್ತೀನ್‌ನ ರಾಮಲ್ಲಾಹ್ ನಿವಾಸಿ ಅಹ್ಮದ್ ಸಫಿ ಎಂಬುವರಿಗೆ ವರ್ಗಾವಣೆಯಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏನಿದು ಕ್ರಿಪ್ಟೋ ಕರೆನ್ಸಿ?: ಅತ್ಯಂತ ಸರಳವಾಗಿ ಹೇಳುವುದಾದರೆ ಇದೊಂದು ಡಿಜಿಟಲ್ ಕರೆನ್ಸಿ. ಇದು ಇಂಟರ್ನೆಟ್ ಆಧಾರಿತವಾಗಿದೆ. ಈ ಕರೆನ್ಸಿಯನ್ನು ವಿನಿಮಯಕ್ಕಾಗಿ ಬಳಕೆ ಮಾಡುತ್ತಾರೆ. ಹಣಕಾಸು ವಿಚಾರಗಳಿಗೆ ಸಂಬಂಧಿಸಿದಂತೆ ನಡೆಯುವ ವಹಿವಾಟನ್ನು ಕ್ರಿಪ್ಟೋಗ್ರಫಿ ಮೂಲಕ ರಕ್ಷಿಸಲಾಗುತ್ತದೆ. ಹೀಗೆಂದರೆ ಸಂಕೇತಗಳ ಮೂಲಕ ಮಾಹಿತಿ ಮತ್ತು ವ್ಯವಹಾರದ ವಿವರಗಳನ್ನು ರಕ್ಷಿಸಿ ಇರಿಸಿಕೊಳ್ಳುವುದಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ