ಮುಂಬೈ/ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ನಿತ್ಯ ಕೋವಿಡ್ ಮೀತಿ ಮೀರುತ್ತಿದ್ದು, ಇದೀಗ ಈ ಹಿಂದಿಗಿಂತಲೂ ಅತಿ ಹೆಚ್ಚಿನ ಕೋವಿಡ್ ಪ್ರಕರಣ ದಾಖಲಾಗಿವೆ.
ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ ದಾಖಲೆಯ 19,486 ಕೋವಿಡ್ ಪ್ರಕರಣ ದಾಖಲಾಗಿದ್ದು 141 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ 63,729 ಸೋಂಕಿತರು ಪತ್ತೆಯಾಗಿದ್ದು, 398 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ನಾಗ್ಪುರ್ದಲ್ಲಿ 6,194 ಕೋವಿಡ್ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 75 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಸದ್ಯ ದಾಖಲೆಯ 6,38,034 ಸಕ್ರಿಯ ಪ್ರಕರಣಗಳಿದ್ದು, ದೆಹಲಿಯಲ್ಲಿ 61,005 ಆ್ಯಕ್ಟಿವ್ ಕೇಸ್ಗಳಿವೆ. ಮುಂಬೈನಲ್ಲಿ 8,839 ಪ್ರಕರಣ ದಾಖಲಾಗಿದ್ದರೆ, 53 ಸಾವು ಸಂಭವಿಸಿವೆ.
ಉಳಿದಂತೆ ಕರ್ನಾಟಕದಲ್ಲಿ 14,859 ಕೋವಿಡ್ ಕೇಸ್, ಉತ್ತರಾಖಂಡ್ನಲ್ಲಿ 2402 ಪ್ರಕರಣ, ಚಂಡೀಗಢದಲ್ಲಿ 481 ಕೇಸ್, ಆಂಧ್ರಪ್ರದೇಶದಲ್ಲಿ 6,096 ಪಾಸಿಟಿವ್, 20 ಸಾವು, ರಾಜಸ್ಥಾನದಲ್ಲಿ 7,359 ಕೇಸ್ ಹಾಗೂ 31 ಸಾವು, ಗುಜರಾತ್ನಲ್ಲಿ 8,920 ಕೋವಿಡ್ ಪಾಸಿಟಿವ್ ಹಾಗೂ 94 ಸಾವು ದಾಖಲಾಗಿವೆ. ಉತ್ತರ ಪ್ರದೇಶದಲ್ಲೂ ಕಳೆದ 24 ಗಂಟೆಯಲ್ಲಿ ದಾಖಲೆಯ 27, 426 ಕೋವಿಡ್ ಪ್ರಕರಣ ದಾಖಲಾಗಿದ್ದು, 103 ಜನರು ಸಾವನ್ನಪ್ಪಿದ್ದಾರೆ. ಇನ್ನು ಪಂಜಾಬ್ನಲ್ಲಿ ಹೊಸದಾಗಿ 3,915 ಪ್ರಕರಣ, ಮಧ್ಯಪ್ರದೇಶದಲ್ಲಿ 11,045 ಕೇಸ್ ಕಾಣಿಸಿಕೊಂಡಿವೆ.
ದೆಹಲಿಯಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಹೇರಲಾಗಿದ್ದು, ಮಹಾರಾಷ್ಟ್ರದಲ್ಲೂ ಸೆಕ್ಷನ್ 144 ಜಾರಿಗೊಂಡಿದ್ದು, ಇದರ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಕರ್ಫ್ಯೂ ಜತೆ ಭಾನುವಾರದ ಲಾಕ್ಡೌನ್ ಸಹ ಘೋಷಣೆ ಮಾಡಲಾಗಿದೆ. ಆದರೂ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗದಿರುವುದು ಮತ್ತಷ್ಟು ಆತಂಕವನ್ನು ತಂದಿಟ್ಟಿದೆ.