ನವದೆಹಲಿ: ಕೋವಿಡ್ಗೆ ಕಡಿವಾಣ ಹಾಕುವ ಸಲುವಾಗಿ ರಾಷ್ಟ್ರ ರಾಜಧಾನಿಯಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಅನ್ನು ಮತ್ತೆ ಒಂದು ವಾರದ ಅವಧಿಗೆ ವಿಸ್ತರಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.
ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ವಿವಿಧ ಸ್ಥಳಗಳಲ್ಲಿ ಆಕ್ಸಿಜನ್ ಬೆಡ್ಗಳನ್ನು ಹೆಚ್ಚಿಸಲು ನಾವು ಈ ಲಾಕ್‌ಡೌನ್ ಅವಧಿಯನ್ನು ಬಳಸಿದ್ದೇವೆ. ಹೀಗಾಗಿ ದೆಹಲಿಯಲ್ಲಿ ಆಮ್ಲಜನಕದ ಪರಿಸ್ಥಿತಿ ಸುಧಾರಿಸಿದೆ. ರಾಷ್ಟ್ರ ರಾಜಧಾನಿಯ ಕೋವಿಡ್ ಸ್ಥಿತಿ ಮತ್ತಷ್ಟು ಸುಧಾರಿಸಲು ಲಾಕ್‌ಡೌನ್ ವಿಸ್ತರಿಸುತ್ತಿರುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಆಕ್ಸಿಜನ್ ಸಮಸ್ಯೆ ಇಲ್ಲ; ಮುಂದಿನ ಮೂರು ತಿಂಗಳಲ್ಲಿ ಎಲ್ಲರಿಗೂ ಕೋವಿಡ್ ವ್ಯಾಕ್ಸಿನ್: ಕೇಜ್ರಿವಾಲ್
ಏಪ್ರಿಲ್ 19ರಿಂದ ದೆಹಲಿಯಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಕಳೆದ ಮೂರು ವಾರಗಳ ಅವಧಿಯಲ್ಲಿ ಪಾಸಿಟಿವ್ ರೇಟ್ ಕಡಿಮೆಯಾಗಿದ್ದು, ಶೇ 35ರಿಂದ 23ಕ್ಕೆ ಇಳಿದಿದೆ.
ದೆಹಲಿಯಲ್ಲಿ ನಿನ್ನೆ ಕಳೆದ 24 ಗಂಟೆಗಳಲ್ಲಿ 17,364 ಹೊಸ ಕೇಸ್ಗಳು ಪತ್ತೆಯಾಗಿತ್ತು. ಮೂರು ವಾರಗಳಲ್ಲಿ ವರದಿಯಾದ ಅತೀ ಕಡಿಮೆ ಪ್ರಕರಣಗಳ ಸಂಖ್ಯೆ ಇದಾಗಿದೆ. ದೆಹಲಿಯಲ್ಲಿ ಈವರೆಗೆ 13,10,231 ಸೋಂಕಿತರು ಪತ್ತೆಯಾಗಿದ್ದು, 19,071 ಮಂದಿ ವೈರಸ್ಗೆ ಬಲಿಯಾಗಿದ್ದಾರೆ. ಇನ್ನು ಈ ಬಾರಿ ಮೆಟ್ರೋ ಸೇವೆಗಳನ್ನೂ ಕೂಡಾ ಸ್ಥಗಿತಗೊಳಿಸಲಾಗಿದೆ.