ನವದೆಹಲಿ:ಸಂಸತ್ತಿನಲ್ಲಿಮಹಿಳಾ ಮೀಸಲಾತಿ ಮಸೂದೆಯನ್ನು ಆದಷ್ಟು ಬೇಗ ಅಂಗೀಕರಿಸುವಂತೆ ಕೋರಿ ಬಿಆರ್ಎಸ್ ನಾಯಕಿ ಕೆ ಕವಿತಾ ಇಲ್ಲಿಯ ಜಂತರ್ ಮಂತರ್ನಲ್ಲಿ ಉಪವಾಸ ನಡೆಸಿದ ಮರುದಿನವೇ ಅಂದರೆ ಇಂದು ಅವರು ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ. ದೆಹಲಿ ಮಾಜಿ ಡಿಸಿಎಂ ಮನಿಶ್ ಸಿಸೋಡಿಯಾ ಬಂಧನದ ಬಳಿಕ ದೆಹಲಿ ಅಬಕಾರಿ ನೀತಿಯ ಅಕ್ರಮ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕವಿತಾ ಅವರಿಗೆ ಬುಧವಾರವೇ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿತ್ತು.
ಕಿಕ್ ಬ್ಯಾಕ್ ಪಡೆದ ಆರೋಪ: ಸಮನ್ಸ್ ಜಾರಿಯಾಗಿರುವ ಹಿನ್ನೆಲೆ ಇಂದು ಅವರು ಇಡಿ ಮುಂದೆ ಹಾಜರಾಗಲಿದ್ದು, ವಿಚಾರಣೆಗೆ ಒಳಪಡಲಿದ್ದಾರೆ. ಈ ವೇಳೆ ಇಡಿ ಅಧಿಖಾರಿಗಳು ಬಿಆರ್ಎಸ್ ನಾಯಕಿ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಈ ಪ್ರಕರಣ ಸಂಬಂಧ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಅವರನ್ನು ಇಡಿ ಬಂಧಿಸಿದೆ. ದೆಹಲಿ ಮದ್ಯ ಹಗರಣದಲ್ಲಿ ಕವಿತಾ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಇಡಿ ಗಂಭೀರ ಆರೋಪ ಮಾಡಿದೆ.
ಇಂದು ವಿಚಾರಣೆ ವೇಳೆ ಇಡಿ ಕವಿತಾ, ಅರುಣ್ ಪಿಳ್ಳೈ ಜೊತೆಗೆ ಪ್ರಶ್ನೆಗಳನ್ನು ಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸೌತ್ ಗ್ರೂಪ್ ನೊಂದಿಗೆ ಉದ್ಯಮಿ ಅರುಣ್ ಪಿಳ್ಳೈ ಸಂಬಂಧ ಹೊಂದಿದ್ದು, ಇದರ ಮೂಲಕ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರಿಗೆ ನೂರಾರು ಕೋಟಿಯನ್ನು ನೀಡಿರುವ ಆರೋಪ ಕೇಳಿ ಬಂದಿದೆ. ಅರುಣ್ ಪಿಳ್ಳೈ ಬಂಧನದ ಬೆನ್ನಲ್ಲೇ ಕವಿತಾ ಅವರಿಗೂ ಕೂಡ ಇಡಿ ಸಮನ್ಸ್ ಜಾರಿ ಮಾಡಿದೆ.