ಕರ್ನಾಟಕ

karnataka

ETV Bharat / bharat

ಅಬಕಾರಿ ನೀತಿ ಹಗರಣದ ಆರೋಪಗಳು ಬಹಳ ಗಂಭೀರ ಸ್ವರೂಪದ್ದಾಗಿವೆ: ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಜಾ - ಜಾರಿ ನಿರ್ದೇಶನಾಲಯ

ಅಬಕಾರಿ ನೀತಿ ಹಗರಣದ ಆರೋಪಗಳು ಬಹಳ ಗಂಭೀರ ಸ್ವರೂಪದ್ದಾಗಿವೆ ಎಂದು ಹೇಳಿ ದೆಹಲಿ ಹೈಕೋರ್ಟ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.

Delhi High Court rejects Manish Sisodias bail plea
ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಜಾ

By

Published : May 30, 2023, 7:59 PM IST

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಸಿಸೋಡಿಯಾ ಪ್ರಭಾವಿ ವ್ಯಕ್ತಿಯಾಗಿದ್ದು, ಅವರ ವಿರುದ್ಧದ ಆರೋಪಗಳು ತುಂಬಾ ಗಂಭೀರವಾಗಿದೆ ಎಂದು ಉಚ್ಛ ನ್ಯಾಯಾಲಯ ಹೇಳಿದೆ.

ಕಳೆದ ಫೆಬ್ರವರಿ 26ರಂದು ಸಿಬಿಐ ಅಧಿಕಾರಿಗಳಿಂದ ಆಮ್ ಆದ್ಮಿ ಪಕ್ಷದ ನಾಯಕರಾದ ಸಿಸೋಡಿಯಾ ಬಂಧನಕ್ಕೊಳಗಾಗಿದ್ದಾರೆ. ಇದೀಗ ಸಿಸೋಡಿಯಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು, ಮನೀಶ್ ಸಿಸೋಡಿಯಾ 18 ಖಾತೆಗಳೊಂದಿಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು. ಸಾಕ್ಷಿಗಳ ಮೇಲೆ ತಮ್ಮ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದರು.

ಅಲ್ಲದೇ, ಅಬಕಾರಿ ನೀತಿಯನ್ನು ಅನಗತ್ಯ ಲಾಭವನ್ನು ನೀಡುವ ದುರುದ್ದೇಶದಿಂದ ರಚಿಸಲಾಗಿದೆ ಎಂಬ ಆರೋಪಗಳು ಬಹಳ ಗಂಭೀರ ಸ್ವರೂಪದ್ದಾಗಿವೆ. ಇಂತಹ ಕೃತ್ಯವು ಸಾರ್ವಜನಿಕ ಸೇವಕನಾಗಿದ್ದು, ಉನ್ನತ ಹುದ್ದೆಯಲ್ಲಿದ್ದ ಅರ್ಜಿದಾರರ ದುರ್ನಡತೆಯನ್ನು ಸೂಚಿಸುತ್ತದೆ. ಪ್ರಸ್ತುತ ಪ್ರಕ್ರಿಯೆಯಲ್ಲಿನ ಅಬಕಾರಿ ನೀತಿ ಅಥವಾ ಆರ್ಥಿಕ ನೀತಿಯ ರಚನೆಗೆ ಸಂಬಂಧಿಸಿದಂತೆ ಸರ್ಕಾರದ ಅಧಿಕಾರವನ್ನು ಪರಿಶೀಲಿಸಿಲ್ಲ. ಜೊತೆಗೆ ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳನ್ನೂ ನ್ಯಾಯಾಲಯವು ಪರಿಶೀಲಿಸಿಲ್ಲ. ಪ್ರಕರಣದ ನಿಖರತೆ ಮತ್ತು ಸನ್ನಿವೇಶಗಳ ಆಧಾರದ ಮೇಲೆ ಅರ್ಜಿದಾರರು ಜಾಮೀನು ಪಡೆಯಲು ಅರ್ಹರಲ್ಲ ಎಂದು ನ್ಯಾಯಾಲಯವು ಪರಿಗಣಿಸುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಅಬಕಾರಿ ನೀತಿ 2021-22ರ ರಚನೆ ಮತ್ತು ಅನುಷ್ಠಾನದಲ್ಲಿ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಅಲ್ಲದೇ, ಸಾಕಷ್ಟು ವಿವಾದ ಸೃಷ್ಟಿಯಾದ ಬೆನ್ನಲ್ಲೇ ಈ ನೀತಿಯನ್ನು ಸರ್ಕಾರ ರದ್ದು ಮಾಡಿತ್ತು. ಸದ್ಯ ಈ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಪ್ರತ್ಯೇಕ ತನಿಖೆ ನಡೆಸುತ್ತಿವೆ. ಹಲವಾರು ಸುತ್ತಿನ ವಿಚಾರಣೆಯ ನಂತರ ಸಿಬಿಐ ಸಿಸೋಡಿಯಾ ಅವರನ್ನು ಬಂಧಿಸಿತ್ತು. ಇದರ ಬಳಿಕ ಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಇಡಿ ಸಹ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಪ್ರಸ್ತುತ ಇಡಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಹಿಂದೆ ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾರ್ಚ್ 31ರಂದು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಈ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಮೊರೆ ಹೋಗಿದ್ದರು. ಆದರೆ, ಇವರ ಜಾಮೀನು ಅರ್ಜಿಯನ್ನು ಸಿಬಿಐ ವಿರೋಧಿಸಿದ್ದು, ಸಿಸೋಡಿಯಾ ಉನ್ನತ ಅಧಿಕಾರದ ಸ್ಥಾನದಲ್ಲಿದ್ದರು ಮತ್ತು ರಾಜಕೀಯ ಪ್ರಭಾವವನ್ನು ಹೊಂದಿದ್ದಾರೆ ಎಂದು ವಾದಿಸುತ್ತಿದೆ. ಅಬಕಾರಿ ನೀತಿ ಹಗರಣದ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಅವರು ಸಿಬಿಐ ತನಿಖೆಗೆ ಆದೇಶದ ದಿನದಂದೇ ಸಿಸೋಡಿಯಾ ಉದ್ದೇಶಪೂರ್ವಕವಾಗಿ ಸಾಕ್ಷ್ಯ ಮತ್ತು ಮೊಬೈಲ್ ಫೋನ್​ಗಳನ್ನು ನಾಶಪಡಿಸಿದ್ದಾರೆ. ಅಲ್ಲದೇ, ಬೇರೆ ಹೆಸರಗಳಲ್ಲಿ ಸಿಮ್​ಗಳನ್ನು ಖರೀದಿಸಿದ್ದಾರೆ. ಇಡೀ ಪ್ರಕರಣದಲ್ಲಿ ಸಿಸೋಡಿಯಾ ಮತ್ತು ಉದ್ಯಮಿ ವಿಜಯ್ ನಾಯರ್ ಪ್ರಮುಖ ಸಂಚುಕೋರರಾಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಇದನ್ನೂ ಓದಿ:ಮೋದಿ ದುರಹಂಕಾರಿ ಎಂದ ಸಿಸೋಡಿಯಾ: ಮಾಜಿ ಡಿಸಿಎಂ ಕೊರಳಪಟ್ಟಿ ಹಿಡಿದು ಎಳೆದುಕೊಂಡು ಹೋದ್ರಾ ಪೊಲೀಸರು?

ABOUT THE AUTHOR

...view details