ಕರ್ನಾಟಕ

karnataka

ETV Bharat / bharat

ಅರಬ್​ ಅಧಿಕಾರಿ ಸೋಗಲ್ಲಿ ಹೋಟೆಲ್​ಗೆ 23 ಲಕ್ಷ ರೂಪಾಯಿ ವಂಚಿಸಿದ ಕರ್ನಾಟಕದ ವ್ಯಕ್ತಿ ಸೆರೆ - man Fraud to hotel an Arab official

ಅರಬ್​ ಅಧಿಕಾರಿಯ ಸೋಗಿನಲ್ಲಿ ದೆಹಲಿಯ ಲೀಲಾ ಪ್ಯಾಲೇಸ್​ ಹೋಟೆಲ್​ಗೆ 23 ಲಕ್ಷ ರೂಪಾಯಿ ವಂಚಿಸಿದ್ದ ಕರ್ನಾಟಕ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

uae-royalty
ದೆಹಲಿಯ ಲೀಲಾ ಪ್ಯಾಲೇಸ್​ ಹೋಟೆಲ್

By

Published : Jan 22, 2023, 1:43 PM IST

ನವದೆಹಲಿ:ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಅಧಿಕಾರಿಯ ಸೋಗಿನಲ್ಲಿ ವ್ಯಕ್ತಿಯೊಬ್ಬ ದಿಲ್ಲಿಯ ಪಂಚತಾರಾ ಹೋಟೆಲ್​ನಲ್ಲಿ ಮೂರು ತಿಂಗಳು ತಂಗಿದ್ದು, ಬಳಿಕ ಹಣ ಪಾವತಿಸದೇ ಪರಾರಿಯಾದ ಘಟನೆ ಇತ್ತೀಚೆಗೆ ನಡೆದಿತ್ತು. ಈ ಅವಧಿಯಲ್ಲಿ ಹೋಟೆಲ್​ಗೆ 23 ಲಕ್ಷ ರೂಪಾಯಿ ವಂಚಿಸಿದ್ದು, ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ. ಕರ್ನಾಟಕದ ದಕ್ಷಿಣ ಕನ್ನಡ ಮೂಲದ ಮಹಮದ್ ಷರೀಫ್ (41) ಬಂಧಿತ ಆರೋಪಿ.

ನಕಲಿ ವ್ಯಾಪಾರ ಕಾರ್ಡ್ ಬಳಸಿ ಕಳೆದ ವರ್ಷ 3 ತಿಂಗಳು ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದು, ಬಳಿಕ ಅಲ್ಲಿನ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದ. ಲೀಲಾ ಹೋಟೆಲ್​ ಮ್ಯಾನೇಜರ್​ ನೀಡಿದ ದೂರಿನನ್ವಯ ವಂಚಕನನ್ನು ಬಂಧಿಸಲಾಗಿದೆ. ದೆಹಲಿಯ ಸರೋಜಿನಿ ನಗರದಲ್ಲಿರುವ ಲೀಲಾ ಹೋಟೆಲ್ ಪ್ಯಾಲೇಸ್‌ನಲ್ಲಿ ಮಹಮದ್ ಷರೀಫ್ ತನ್ನನ್ನು ಅರಬ್​ ಸರ್ಕಾರದ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದ. ನಕಲಿ ವ್ಯಾಪಾರ ಕಾರ್ಡ್‌ ಅನ್ನು ಅಲ್ಲಿನ ಸಿಬ್ಬಂದಿಗೆ ತೋರಿಸಿದ್ದ. ಅರಬ್​ ವೇಷಭೂಷಣದಲ್ಲಿದ್ದ ವ್ಯಕ್ತಿಯನ್ನು ಅಧಿಕಾರಿ ಎಂದು ನಂಬಿದ್ದ ಹೋಟೆಲ್​ ಸಿಬ್ಬಂದಿ ಅವರಿಗೆ ಐಷಾರಾಮಿ ಕೊಠಡಿಯನ್ನು ನೀಡಿದ್ದರು.

3 ತಿಂಗಳು ಹೋಟೆಲ್​ನಲ್ಲೇ ತಂಗಿದ್ದ ವಂಚಕ ಸ್ವಲ್ಪವೂ ಅನುಮಾನ ಬಾರದಂತೆ ನಡೆದುಕೊಂಡಿದ್ದ. ಬಳಿಕ ಏಕಾಏಕಿ ಹೋಟೆಲ್​ನಲ್ಲಿದ್ದ ಬೆಲೆಬಾಳುವ ವಸ್ತುಗಳ ಸಮೇತ ಪರಾರಿಯಾಗಿದ್ದ. ಈ ಅವಧಿಯಲ್ಲಿ ಹೋಟೆಲ್​ಗೆ ತಂಗಿದ್ದ ವೆಚ್ಚವಾಗಿ 23.46 ಲಕ್ಷ ರೂಪಾಯಿ ಪಾವತಿಸದೇ ವಂಚಿಸಿದ್ದ. ಬಳಿಕ ಹೋಟೆಲ್​ ಮ್ಯಾನೇಜರ್​ ನಗರದ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಕರ್ನಾಟಕದಲ್ಲಿ ವಂಚಕನ ಬಂಧನ:ಹೋಟೆಲ್​ಗೆ ಅರಬ್​ ಅಧಿಕಾರಿಯ ವೇಷದಲ್ಲಿ ವಂಚಿಸಿದ ಆರೋಪಿ ಕರ್ನಾಟಕ ಮೂಲದವ ಎಂದು ಪತ್ತೆ ಮಾಡಿದ ದೆಹಲಿ ಪೊಲೀಸರು, ಬಳಿಕ ಆತನನ್ನು ದಕ್ಷಿಣ ಕನ್ನಡದಲ್ಲಿ ಜನವರಿ 19ರಂದು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

"ಕಳೆದ ವರ್ಷ ಆಗಸ್ಟ್ 1ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ರೆಸಿಡೆಂಟ್ ಕಾರ್ಡ್ ಹೊಂದಿದ್ದ ವ್ಯಕ್ತಿ ಲೀಲಾ ಪ್ಯಾಲೇಸ್​ ಹೋಟೆಲ್​ಗೆ ಆರೋಪಿ ತನ್ನನ್ನು ಸರ್ಕಾರದ ಕಾರ್ಯದರ್ಶಿ ಎಂದು ಹೇಳಿ ಕೊಠಡಿ ಬುಕ್​ ಮಾಡಿದ್ದಾನೆ. 3 ತಿಂಗಳಿಗೂ ಅಧಿಕ ದಿನ ಉಳಿದುಕೊಂಡಿದ್ದ ವ್ಯಕ್ತಿ ಬಳಿಕ ನವೆಂಬರ್​ನಲ್ಲಿ 20 ಲಕ್ಷದ ಚೆಕ್​ ನೀಡಿದ್ದಾನೆ. ಅದು ಹಣವಿಲ್ಲದೇ ಬೌನ್ಸ್​ ಆಗಿದ್ದು, ಹೋಟೆಲ್​ಗೆ ವಂಚಿಸಿದ್ದಾನೆ. ಇದು ಆತನ ದುರಾಲೋಚನೆ ಮತ್ತು ಹೋಟೆಲ್​ಗೆ ವಂಚಿಸುವ ಸ್ಪಷ್ಟ ಉದ್ದೇಶವನ್ನು ಸೂಚಿಸುತ್ತದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಗಣತಂತ್ರ ದಿನಕ್ಕೆ ಮುನ್ನ ಜಮ್ಮುವಿನಲ್ಲಿ ಸ್ಫೋಟ, 9 ಮಂದಿಗೆ ಗಾಯ; ಭದ್ರತಾ ಪಡೆಗಳಿಂದ ಕಟ್ಟೆಚ್ಚರ

ABOUT THE AUTHOR

...view details