ನವದೆಹಲಿ:ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಗೋವಾದಲ್ಲಿ ಅಕ್ರಮವಾಗಿ ಬಾರ್ & ರೆಸ್ಟೋರೆಂಟ್ ನಡೆಸುತ್ತಿದ್ದಾರೆಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದು, ಸಚಿವ ಸ್ಥಾನದಿಂದ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿತ್ತು. ತಮ್ಮ ಮೇಲೆ ಕೇಳಿ ಬಂದಿದ್ದ ಗಂಭೀರ ಆರೋಪವನ್ನು ಪ್ರಶ್ನೆ ಮಾಡಿದ್ದ ಕೇಂದ್ರ ಸಚಿವೆ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಮಹತ್ವದ ಆದೇಶ ಹೊರಹಾಕಿರುವ ಹೈಕೋರ್ಟ್ ಸ್ಮೃತಿ ಇರಾನಿ, ಪುತ್ರಿ ಗೋವಾದಲ್ಲಿ ಯಾವುದೇ ರೀತಿಯ ರೆಸ್ಟೋರೆಂಟ್ ಹೊಂದಿಲ್ಲ, ಜೊತೆಗೆ ಲೈಸನ್ಸ್ಗೋಸ್ಕರ ಅರ್ಜಿಯನ್ನೂ ಸಲ್ಲಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಜುಲೈ 23ರಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್ನ ಜೈರಾಮ್ ರಮೇಶ್ ಹಾಗೂ ಇತರೆ ಮುಖಂಡರು ಸ್ಮೃತಿ ಇರಾನಿ ವಿರುದ್ಧ ಈ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಸಚಿವೆ, ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ಧ ನಾನು ವಾಗ್ದಾಳಿ ನಡೆಸುತ್ತಿರುವ ಕಾರಣ ನನ್ನ ಮೇಲೆ ಇಂತಹ ಆರೋಪ ಮಾಡಲಾಗಿದೆ. ಕಾಂಗ್ರೆಸ್ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಕೇವಲ 18 ವರ್ಷದ ಅಮಾಯಕ ಮಗಳ ಮೇಲೆ ಇಂತಹ ಆರೋಪ ಸರಿಯಲ್ಲ ಎಂದಿದ್ದರು. ಇದರ ಜೊತೆಗೆ ಕೋರ್ಟ್ ಮೂಲಕ ತಿರುಗೇಟು ನೀಡುವುದಾಗಿಯೂ ತಿಳಿಸಿದ್ದರು. ಜೊತೆಗೆ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಮೂಲಕ ಲೀಗಲ್ ನೋಟಿಸ್ ಜಾರಿ ಮಾಡಿದ್ದರು.