ನವದೆಹಲಿ: ಸಂವಿಧಾನ ಮತ್ತು ಮಾಹಿತಿ ಹಕ್ಕು ಕಾಯಿದೆಯಡಿ ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳ ನಿಧಿಯ (ಪಿಎಂ ಕೇರ್ಸ್ ಫಂಡ್) ಕಾನೂನು ಸ್ಥಿತಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯು ದೆಹಲಿ ಹೈಕೋರ್ಟ್ನಲ್ಲಿ 2023ರ ಜನವರಿ 31 ರಂದು ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠವು, ಈ ವಿಷಯದಲ್ಲಿ ತನ್ನ ಉತ್ತರವನ್ನು ಸಲ್ಲಿಸಲು ಕೇಂದ್ರಕ್ಕೆ ನಾಲ್ಕು ವಾರಗಳ ಕಾಲಾವಕಾಶವನ್ನು ನೀಡಿದೆ. ಪಿಎಂ ಕೇರ್ಸ್ ನಿಧಿಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಸಂವಿಧಾನದ 12 ನೇ ವಿಧಿಯ ಅಡಿ ಅದನ್ನು 'ರಾಜ್ಯ' ಎಂದು ಘೋಷಿಸಲು ಕೋರಿ ಜುಲೈನಲ್ಲಿ ಸಮ್ಯಕ್ ಗಂಗ್ವಾಲ್ ಎಂಬುವರು ಸಲ್ಲಿಸಿದ ಅರ್ಜಿಯ ಬಗ್ಗೆ ವಿವರವಾದ ಮತ್ತು ಸಮಗ್ರವಾದ ಉತ್ತರವನ್ನು ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿತ್ತು.
ಆದರೆ ಇಂಥ ಮಹತ್ವದ ವಿಷಯದ ಬಗ್ಗೆ ಕೇವಲ ಒಂದು ಪುಟದ ಉತ್ತರ ಸಲ್ಲಿಸಿರುವುದನ್ನು ಗಮನಿಸಿದ ನ್ಯಾಯಪೀಠ, ಸರ್ಕಾರದಿಂದ ಸಮಗ್ರವಾದ ಉತ್ತರವನ್ನು ಬಯಸಿದೆ. ಅದೇ ಅರ್ಜಿದಾರರು ಸಲ್ಲಿಸಿದ ಮತ್ತೊಂದು ಅರ್ಜಿಯು, ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ನಿಧಿಯನ್ನು 'ಸಾರ್ವಜನಿಕ ಪ್ರಾಧಿಕಾರ' ಎಂದು ಘೋಷಿಸಲು ಕೋರಿದೆ.