ನವದೆಹಲಿ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಹೊಸ ಪುಸ್ತಕ 'ಸನ್‌ರೈಸ್ ಓವರ್ ಆಯೋಧ್ಯೆ: ನೇಷನ್‌ಹುಡ್ ಇನ್ ಅವರ್ ಟೈಮ್ಸ್' ಪುಸ್ತಕ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಕೋರ್ಟ್ ಇಂದು ವಜಾಗೊಳಿಸಿತು.
ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಯಶ್ವಂತ್ ವರ್ಮಾ ಅವರಿದ್ದ ಪೀಠ, ಒಂದು ವೇಳೆ ಲೇಖಕನ ಪುಸ್ತಕದಲ್ಲಿರುವ ಅಭಿಪ್ರಾಯಗಳು ನಿಮಗೆ ಇಷ್ಟವಾಗಿಲ್ಲ ಎಂದಾದರೆ ಆ ಪುಸ್ತಕವನ್ನು ನೀವು ಓದಬೇಡಿ ಎಂದರು. ವಕೀಲ ವಿನೀತ್ ಜಿಂದಾಲ್ ಖುರ್ಷಿದ್ ಅವರ ಪುಸ್ತಕದ ವಿರುದ್ಧ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದ ವಕೀಲ ರಾಜ್‌ಕಿಶೋರ್ ಚೌಧರಿ, ಸಲ್ಮಾನ್ ಖುರ್ಷಿದ್ ಸಂಸತ್ ಸದಸ್ಯರಾಗಿದ್ದಾರೆ. ಜೊತೆಗೆ, ಕೇಂದ್ರದ ಕಾನೂನು ಸಚಿವರಾಗಿದ್ದವರು. ಅವರು ತುಂಬಾ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಅವರ ಪುಸ್ತಕದಲ್ಲಿನ ವಿಚಾರಗಳು ಹಿಂದೂ ಸಮುದಾಯದ ತಳಮಳಕ್ಕೆ ಕಾರಣವಾಗಿದೆ. ದೇಶದಲ್ಲಿ ಸಾಮರಸ್ಯ, ಶಾಂತಿ ಹಾಗೂ ಭದ್ರತೆ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.