ನವದೆಹಲಿ: ಆಕ್ಸಿಜನ್ ಸಿಲಿಂಡರ್ಗಳ ಕೊರತೆಯನ್ನು ರಾಷ್ಟ್ರ ರಾಜಧಾನಿ ಎದುರಿಸುತ್ತಿದ್ದು, ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
ರೆಮ್ಡಿಸಿವಿರ್ ಔಷಧದ ಕೊರತೆಯ ಬಗ್ಗೆಯೂ ದೆಹಲಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಕೋವಿಡ್ ಸೋಂಕಿತರಿಗೆ ಅತಿ ಹೆಚ್ಚು ಬಳಸಲ್ಪಡುವ ಈ ಔಷಧದ ಕೊರತೆಗೆ ಕಾರಣವೇನು ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರವನ್ನು ಪ್ರಶ್ನಿಸಿದೆ.
ಆಕ್ಸಿಜನ್ ಮತ್ತು ಹಾಸಿಗೆ ರೋಗಿಗಳಿಗೆ ಅತಿ ಹೆಚ್ಚು ಮುಖ್ಯವಾಗಿದ್ದು, ಇವರೆಡೂ ಇಲ್ಲದಿದ್ದರೆ ರೋಗಿಗಳು ಔಷಧವನ್ನು ಹೇಗೆ ಪಡೆಯಲು ಸಾಧ್ಯ? ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈಕೋರ್ಟ್ ಪ್ರಶ್ನೆ ಮಾಡಿದೆ.
ದೆಹಲಿಯಲ್ಲಿ ಈ ಔಷಧ ಸಮಸ್ಯೆಗೆ ಕಾರಣವೇನು ಎಂಬುದನ್ನು ತಿಳಿಸಿಕೊಡಬೇಕೆಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಓರ್ವ ಪ್ರತಿನಿಧಿ ಮತ್ತು ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ.