ನವದೆಹಲಿ: ಆಮ್ ಆದ್ಮಿ ಪಾರ್ಟಿ (ಎಎಪಿ) ನೇತೃತ್ವದ ದೆಹಲಿ ಸರ್ಕಾರವು ನಿನ್ನೆ(ಗುರುವಾರ) ಆಡಳಿತ ಸೇವಾ ಇಲಾಖೆಯ ಕಾರ್ಯದರ್ಶಿ ಆಶಿಶ್ ಮೋರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದೆ. ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಕುರಿತು ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅಧಿಕಾರ ನೀಡಿ ಮಹತ್ವದ ತೀರ್ಪು ನೀಡಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಆಶಿಶ್ ಮೋರ್ ಅವರಿಂದ ತೆರವಾದ ಸೇವಾ ಕಾರ್ಯದರ್ಶಿ ಸ್ಥಾನಕ್ಕೆ 1995ರ ಬ್ಯಾಚ್‌ನ (ಎಜಿಎಂಯುಟಿ ಕೇಡರ್) ಐಎಎಸ್ ಅಧಿಕಾರಿಯಾಗಿರುವ ದೆಹಲಿ ಜಲ ಮಂಡಳಿಯ ಮಾಜಿ ಸಿಇಒ ಎ.ಕೆ.ಸಿಂಗ್ ಮೋರ್ ಅವರನ್ನು ನೇಮಿಸಲಾಗಿದೆ. ಆದರೆ, ಸೇವಾ ಇಲಾಖೆಯ ಮೂಲಗಳು, ಸರ್ಕಾರ ಹೊರಡಿಸಿರುವ ಆದೇಶ ಕಾನೂನುಬಾಹಿರ ಎಂದು ಹೇಳಿದೆ. ಅಧಿಕಾರಿಗಳ ಪ್ರಕಾರ, ನಾಗರಿಕ ಸೇವಾ ಮಂಡಳಿಯನ್ನು ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡಿದೆ ಎಂದಿದ್ದಾರೆ.
ಇದನ್ನೂ ಓದಿ :ಶಿಕ್ಷಕರ ನೇಮಕಾತಿ ಹಗರಣ : ವಿಚಾರಣೆಯಿಂದ ನ್ಯಾ.ಅಭಿಜಿತ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ನಿರ್ದೇಶನ
ದೆಹಲಿ ಸರ್ಕಾರವು 2014 ರಲ್ಲಿ CSB ಸ್ಥಾಪಿಸಿತು. ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್ ಮತ್ತು ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ಸೇವೆಗಳ ಆಡಳಿತದ ಮೇಲೆ ದೆಹಲಿ ಸರ್ಕಾರವು ಶಾಸಕಾಂಗ ಮತ್ತು ಕಾರ್ಯಕಾರಿ ಅಧಿಕಾರ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ :ದೆಹಲಿ ಸರ್ಕಾರ-ಕೇಂದ್ರದ ನಡುವಿನ 'ಪವರ್' ಫೈಟ್ : ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಸುಪ್ರೀಂ ತೀರ್ಪಿನ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ಸರ್ಕಾರದಲ್ಲಿ ಪ್ರಮುಖ ಆಡಳಿತದ ಪುನರ್ ರಚನೆ ನಡೆಯಲಿದೆ, ನಾವು ಸಾರ್ವಜನಿಕರಿಗೆ ಜವಾಬ್ದಾರಿಯುತ ವ್ಯವಸ್ಥೆಯನ್ನು ರಚಿಸುತ್ತೇವೆ. ಸಾರ್ವಜನಿಕ ಕೆಲಸಕ್ಕೆ ಅಡಚಣೆ ಉಂಟುಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದಕ್ಷ, ಪ್ರಾಮಾಣಿಕ, ಸ್ಪಂದಿಸುವ ಮತ್ತು ಸಹಾನುಭೂತಿಯುಳ್ಳ ಅಧಿಕಾರಿಗಳಿಗೆ ಮಾತ್ರ ದೆಹಲಿಯ ಜನತೆಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ. ಬಳಿಕ ದೆಹಲಿ ಸರ್ಕಾರದ ಪರವಾಗಿ ಸರ್ವಾನುಮತದಿಂದ ತೀರ್ಪು ನೀಡಿದ್ದಕ್ಕಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಪೀಠಕ್ಕೆ ಸಿಎಂ ಧನ್ಯವಾದ ಹೇಳಿದರು.
ಇದನ್ನೂ ಓದಿ :ಮುಸ್ಲಿಂ ಕೋಟಾ ಬಗ್ಗೆ ರಾಜಕೀಯ ಹೇಳಿಕೆ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ
ದೆಹಲಿ ಸರ್ಕಾರ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ಪ್ರಕರಣದಲ್ಲಿ ಅಧಿಕಾರಿಗಳ ವರ್ಗಾವಣೆ- ಪೋಸ್ಟಿಂಗ್ ಹಕ್ಕಿನ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದೆಹಲಿ ಸರ್ಕಾರಕ್ಕೆ ಸಿಕ್ಕ ದೊಡ್ಡ ಜಯವಾಗಿದೆ. ನ್ಯಾಯಾಲಯದ ತೀರ್ಪಿಗೂ ಮೊದಲು ಸೇವಾ ಇಲಾಖೆಯು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಿಯಂತ್ರಣದಲ್ಲಿತ್ತು ಅನ್ನೋದು ಗಮನಾರ್ಹ.
ಇದನ್ನೂ ಓದಿ :ಸುಪ್ರೀಂ ತೀರ್ಪು ಹಿನ್ನಡೆಯಲ್ಲ, ಪ್ರತಿಭಟನೆ ಮುಂದುವರಿಯುತ್ತದೆ : ಕುಸ್ತಿಪಟುಗಳ ಹೇಳಿಕೆ