ನವದೆಹಲಿ:ಕೊರೊನಾ ಸಾಂಕ್ರಾಮಿಕ ಅದೆಷ್ಟೋ ಕುಟುಂಬಗಳನ್ನು ಆಪೋಷನ ತೆಗೆದುಕೊಂಡಿದೆ. ರೋಗ ಅಟ್ಟಹಾಸ ಮೆರೆಯುತ್ತಿದ್ದ ವೇಳೆ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡಿದ್ದ ವೈದ್ಯರು, ನರ್ಸ್ಗಳು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿ ಸರ್ಕಾರ ಇಂಥ ಕೋವಿಡ್ ವಾರಿಯರ್‌ಗಳ ಕುಟುಂಬಗಳ ನೆರವಿಗೆ ಧಾವಿಸಿದೆ. ಈವರೆಗೆ 31 ಕೋವಿಡ್ ವಾರಿಯರ್ಸ್ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿ ವಿತರಿಸಿದೆ.
ದಾದಿ (ನರ್ಸ್) ಆಗಿ ಕೆಲಸ ಮಾಡುತ್ತಿದ್ದ ದೆಹಲಿ ಮಹಿಳೆ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಕೊರೊನಾಗೆ ಬಲಿಯಾಗಿದ್ದರು. ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸರ್ಕಾರ ಬುಧವಾರ ನೆರವು ನೀಡಿದೆ. ಆ ದಾದಿಯ ಕುಟುಂಬವನ್ನು ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಅವರು ಭೇಟಿ ಮಾಡಿ ಧನ ಸಹಾಯ ನೀಡಿದರು.
ಕೊರೊನಾ ವಾರಿಯರ್ ಆಗಿದ್ದ ದಾದಿ ಗಾಯತ್ರಿ ಶರ್ಮಾ ಅವರು 1998 ರಿಂದ ಜಿಟಿಬಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. 2024 ರ ಜನವರಿಯಲ್ಲಿ ಅವರು ನಿವೃತ್ತಿ ಹೊಂದಬೇಕಿತ್ತು. ಆದರೆ, ಕಳೆದ ವರ್ಷ ಗಾಯತ್ರಿ ಶರ್ಮಾ ಅವರನ್ನು ಕೊರೊನಾ ವಾರಿಯರ್ ಆಗಿ ಗಾಜಿಪುರ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಕರ್ತವ್ಯ ನಿರ್ವಹಣೆಯ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿ ಸಾವನ್ನಪ್ಪಿದ್ದರು. ಇದರಿಂದಾಗಿ ಗಾಯತ್ರಿ ಶರ್ಮಾ ಅವರು ತಮ್ಮ ಪತಿ ಯಜ್ಞದತ್ತ್ ಶರ್ಮಾ ಮತ್ತು ಒಬ್ಬ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದರು. ಮಗಳು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು, ಮಗ ಹಿಂದೂ ಕಾಲೇಜಿನಲ್ಲಿ ಓದುತ್ತಿದ್ದಾಳೆ ಎಂದು ಆರೋಗ್ಯ ಇಲಾಖೆ ಅಧಿಕೃತ ಪ್ರಕಟಣೆ ತಿಳಿಸಿದೆ.
ಆರೋಗ್ಯ ಸಚಿವ ಭಾರದ್ವಾಜ್ ಅವರು, ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಲ್ಲದೇ, “ಗಾಯತ್ರಿ ಶರ್ಮಾ ಅವರು ಆರೋಗ್ಯ ಇಲಾಖೆಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಜನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಜೀವನದ ಮೌಲ್ಯವನ್ನು ಅಳೆಯಲಾಗದಿದ್ದರೂ, ಈ ಗೌರವಧನವು ಕೊರೊನಾ ಯೋಧರ ತ್ಯಾಗಕ್ಕೆ ಕೇಜ್ರಿವಾಲ್ ಸರ್ಕಾರದಿಂದ ನೀಡಲಾಗುತ್ತಿರುವ ಸಣ್ಣ ಸಹಾಯ ಮತ್ತು ಗೌರವವಾಗಿದೆ" ಎಂದು ಹೇಳಿದರು.
ಕೊರೊನಾ ಯೋಧರು ಸಾಂಕ್ರಾಮಿಕ ಸಮಯದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡಿದರು. ಮಾನವೀಯತೆ ಮತ್ತು ಸಮಾಜವನ್ನು ರಕ್ಷಿಸಲು ತಮ್ಮ ಪ್ರಾಣದ ಬಗ್ಗೆಯೂ ಕಾಳಜಿ ವಹಿಸದೆ ದುಡಿದರು. ಅವರ ಆತ್ಮಗಳಿಗೆ ದೆಹಲಿ ಸರ್ಕಾರ ನಮನ ಸಲ್ಲಿಸುತ್ತದೆ. ಹುತಾತ್ಮರಾದ ಕೊರೊನಾ ಯೋಧರ ಕುಟುಂಬದ ನಷ್ಟವನ್ನು ಯಾವುದೇ ಮೊತ್ತ ಕೂಡಾ ಸರಿದೂಗಿಸಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬ ಈ ಮೊತ್ತದ ಮೂಲಕ ಗೌರವಯುತ ಜೀವನವನ್ನು ನಡೆಸಲಿ ಎಂದು ಮಾಜಿ ಆರೋಗ್ಯ ಮನೀಶ್ ಸಿಸೋಡಿಯಾ ಹೇಳಿದ್ದರು.
ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, ಕೊರೊನಾ ಸಮಯದಲ್ಲಿ ತಮ್ಮ ಜೀವನವನ್ನೂ ಲೆಕ್ಕಿಸದೇ ಲಕ್ಷಾಂತರ ಜೀವಗಳನ್ನು ಉಳಿಸಿದ 28 ಕೊರೊನಾ ಯೋಧರ ಕುಟುಂಬಗಳಿಗೆ ತಲಾ ₹1 ಕೋಟಿ ಮೊತ್ತವನ್ನು ಮಂಜೂರು ಮಾಡಲಾಗಿದೆ. ಕೊರೊನಾ ಯೋಧರ ಕುಟುಂಬದೊಂದಿಗೆ ಸರ್ಕಾರ ನಿಂತಿದೆ ಎಂದು ಹೇಳಿದ್ದರು.
ಸಾಂಕ್ರಾಮಿಕ ಸಮಯದಲ್ಲಿ ಆಪ್ ಸರ್ಕಾರ ಮುಂಚೂಣಿ ಕೊರೊನಾ ವಾರಿಯರ್ಸ್ಗೆ ಮತ್ತು ಆರೋಗ್ಯ ಕಾರ್ಯಕರ್ತರ ಕುಟುಂಬಗಳಿಗೆ ಒಂದು ಕೋಟಿ ರೂಪಾಯಿ ಪರಿಹಾರವನ್ನು ನೀಡುವುದಾಗಿ ಘೋಷಿಸಿತ್ತು. ರಾಜ್ಯ ಸರ್ಕಾರ ಈಗಾಗಲೇ 31 ಕೊರೊನಾ ಯೋಧರ ಕುಟುಂಬಗಳಿಗೆ ಪರಿಹಾರವನ್ನು ಒದಗಿಸಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿಂದು ವರುಣನ ಆರ್ಭಟ: ಇನ್ನೆರೆಡು ದಿನ ಗುಡುಗು ಸಹಿತ ಮಳೆ ಸಾಧ್ಯತೆ