ನವದೆಹಲಿ: ದೇಶದಲ್ಲಿ ಕೋವಿಡ್ ಮೂರನೇ ಅಲೆ ಜೋರಾಗಿದೆ. ಪ್ರತಿದಿನ ಲಕ್ಷಾಂತರ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಏರುತ್ತಲೇ ಸಾಗಿದೆ. ಇದರ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹತ್ವದ ಘೋಷಣೆ ಮಾಡಿದ್ದಾರೆ.
ಲೋಕನಾಯಕ ಜೈಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಸಂಬಂಧಿತ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ದೆಹಲಿಯಲ್ಲಿ ಯಾವುದೇ ಕಾರಣಕ್ಕೂ ಲಾಕ್ಡೌನ್ ಹೇರಿಕೆ ಮಾಡಲ್ಲ ಎಂದು ತಿಳಿಸಿರುವ ಅವರು, ಮೂರನೇ ಅಲೆ ಎದುರಿಸಲು ಸಜ್ಜಾಗಿದ್ದೇವೆ ಎಂದರು.
ದೆಹಲಿಯಲ್ಲಿ ಪ್ರತಿದಿನ 20-22 ಸಾವಿರದಷ್ಟು ಕೋವಿಡ್ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಇದರ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಸೇರಿದಂತೆ ಇತರೆ ಮಾರ್ಗಸೂಚಿ ಜಾರಿ ಮಾಡಿರುವ ಬಗ್ಗೆ ಮಾತನಾಡಿದ ಕೇಜ್ರಿವಾಲ್, ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡಲ್ಲ ಎಂದರು.