ನವದೆಹಲಿ: ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ 16 ವರ್ಷದ ಬಾಲಕಿ ಸಾಕ್ಷಿಯನ್ನು ಕಿಡಿಗೇಡಿ ಪ್ರೇಮಿ ಮೊಹಮ್ಮದ್ ಸಾಹಿಲ್ ಖಾನ್ ಎಂಬಾತ ಇತ್ತೀಚೆಗೆ ಅತ್ಯಂತ ಬರ್ಬರವಾಗಿ ಹತ್ಯೆಗೈದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಅವರ ಸ್ನೇಹ ಸಂಬಂಧದ ಬಗ್ಗೆ ಆಕೆಯ ತಂದೆಗೆ ತಿಳಿದಿತ್ತು ಎಂಬ ಅಂಶ ಉಲ್ಲೇಖವಾಗಿದೆ.
ಎಫ್‌ಐಆರ್ ಪ್ರಕಾರ, ಸಾಕ್ಷಿ ತಂದೆ ಜನಕ್ ರಾಜ್ (35) ಹೇಳುವಂತೆ, "ನಮ್ಮ ಮಗಳು ಆತನ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದಳು. ಅವಳ ವಯಸ್ಸಿಗೆ ಇದು ಸೂಕ್ತವಲ್ಲ ಎಂದು ನಾವು ಅವಳಿಗೆ ಪದೇ ಪದೇ ಹೇಳಿದ್ದೆವು. ಆದರೆ, ಈ ವಿಷಯ ತೆಗೆದಾಗಲೆಲ್ಲ ಆಕೆ ಕೋಪಗೊಂಡು ಸ್ನೇಹಿತೆ ನೀತು ಮನೆಗೆ ಹೋಗುತ್ತಿದ್ದಳು. ಸಾಕ್ಷಿ ಕಳೆದ 10 ದಿನಗಳಿಂದ ನೀತು ಜೊತೆಯಲ್ಲೇ ಇದ್ದಳು. ಮೇ 29- 30ರ ರಾತ್ರಿ ನೀತು ನಮ್ಮ ಮನೆಗೆ ಓಡಿ ಬಂದು ಸಾಕ್ಷಿಯ ಸ್ನೇಹಿತ ಸಾಹಿಲ್ ಖಾನ್ ನಿಮ್ಮ ಮಗಳಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿಸಿದಳು" ಎಂದು ವಿವರಿಸಿದ್ದಾರೆ.
ಇನ್ನು, ಬುಧವಾರ ಮುಂಜಾನೆ ಪೊಲೀಸರು ಕೊಲೆ ದೃಶ್ಯ ಮರುಸೃಷ್ಟಿಸಲು ಆರೋಪಿಯನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದಿದ್ದರು. ಮೂಲಗಳ ಪ್ರಕಾರ, ತನಿಖಾಧಿಕಾರಿಗಳು ಸಾಹಿಲ್ ಖಾನ್‌ಗೆ ಮನೋವಿಶ್ಲೇಷಣೆ ಪರೀಕ್ಷೆ ಅಥವಾ ಸೈಕೋ ಮೌಲ್ಯಮಾಪನ ಪರೀಕ್ಷೆ ನಡೆಸಲು ಪರಿಗಣಿಸಬಹುದು ಎಂದು ವರದಿಯಾಗಿದೆ. ಮನೋವಿಶ್ಲೇಷಣೆಯ ಪರೀಕ್ಷೆಯ ಸಮಯದಲ್ಲಿ ಸಾಹಿಲ್ ಕುಟುಂಬ, ಸ್ನೇಹಿತರು ಮತ್ತು ಜೀವನಶೈಲಿಯ ಬಗ್ಗೆ ಪ್ರಶ್ನಿಸಲಾಗುತ್ತದೆ. ಈ ಪರೀಕ್ಷೆಯು ಸುಮಾರು ಮೂರು ಗಂಟೆಗಳ ಕಾಲ ನಡೆಯುವ ನಿರೀಕ್ಷೆಯಿದೆ. ಕೊಲೆಗಾರನ ಮಾನಸಿಕ ಸ್ಥಿತಿಮಿತಿಯ ಒಳನೋಟವನ್ನು ಪಡೆಯಲು ಪೊಲೀಸರಿಗೆ ಸಹಾಯ ಮಾಡುವ ಉದ್ದೇಶವನ್ನು ಇದು ಹೊಂದಿದೆ. ಅನುಭವಿ ಮನೋವೈದ್ಯರು ಪರೀಕ್ಷೆ ನಡೆಸುತ್ತಾರೆ ಎಂದು ಮೂಲಗಳು ತಿಳಿಸಿವೆ.