ನವದೆಹಲಿ: ಭಾರತ ಇನ್ನೂ ವಿಭಜನೆಯ ಭಾರವನ್ನು ಹೊತ್ತಿದೆ ಎಂದು ನಾಗರಿಕ ವಿಮಾನಯಾನ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ರಾಜ್ಯ ಸಚಿವ (MoS) ಜನರಲ್ ವಿ ಕೆ ಸಿಂಗ್ ಎಚ್ಚರಿಸಿದ್ದಾರೆ. ಧರ್ಮ ಮತ್ತು ಜಾತಿಯನ್ನು ಲೆಕ್ಕಿಸದೆ ದೇಶದ ನಾಗರಿಕರು ಒಗ್ಗಟ್ಟಿನಿಂದ ಇರಬೇಕೆಂದು ಅವರು ಹೇಳಿದ್ದಾರೆ. ಇಲ್ಲಿ ನಡೆದ ಶಹೀದ್ ನಾನಕ್ ಸಿಂಗ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶವಿಭಜನೆಯ ವಿರುದ್ಧ ಆಂದೋಲನ ನಡೆಸುತ್ತಿದ್ದ ವಿದ್ಯಾರ್ಥಿಗಳ ಪ್ರಾಣ ರಕ್ಷಣೆಗಾಗಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪ್ರಾಣ ತ್ಯಾಗ ಮಾಡಿದ ದಿವಂಗತ ನಾನಕ್ ಸಿಂಗ್ ಅವರ ಶೌರ್ಯವನ್ನು ಸ್ಮರಿಸಿದ ಜನರಲ್ ವಿ ಕೆ ಸಿಂಗ್, ಸೇನೆಯಲ್ಲಿ ನಾವು ಯಾರದೇ ಧರ್ಮವನ್ನು ಉಲ್ಲೇಖಿಸುವುದಿಲ್ಲ ಮತ್ತು ಯಾರು ಯಾವ ಧರ್ಮಕ್ಕೆ ಸೇರಿದವರು ಎಂಬುದನ್ನು ಸಹ ಪರಿಗಣಿಸುವುದಿಲ್ಲ. ಸೇನೆ ಎಂಬುದು ನಮಗೆ ಏಕತೆಯ ಮಹತ್ವವನ್ನು ಕಲಿಸುವ ಸಂಸ್ಥೆಯಾಗಿದೆ ಎಂದರು.
ಶಹೀದ್ ನಾನಕ್ ಸಿಂಗ್ ಅವರು ಸುಮಾರು ನಾಲ್ಕು ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರು ಅದರ ಶ್ರೀಮಂತ ಪರಂಪರೆಯ ರಾಯಭಾರಿಯಾಗಿದ್ದಾರೆ. ಆದ್ದರಿಂದ ನಮ್ಮ ಶಕ್ತಿ ಏಕತೆಯಲ್ಲಿದೆ ಮತ್ತು ವಿಭಜನೆಯಲ್ಲಿ ಅಲ್ಲ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದರು. 1857 ರಲ್ಲಿ ವಸಾಹತುಶಾಹಿ ಆಡಳಿತದ ವಿರುದ್ಧ ಏಕೀಕೃತ ಆಂದೋಲನ ನಡೆದಿತ್ತು ಮತ್ತು ಈ ದೇಶವನ್ನು ವಿಭಜಿಸಿದಾಗ ಮಾತ್ರ ಇದನ್ನು ನಿಯಂತ್ರಿಸಬಹುದು ಎಂಬುದನ್ನು ಈಸ್ಟ್ ಇಂಡಿಯಾ ಕಂಪನಿ ಅರಿತುಕೊಂಡಿತ್ತು. ಹೀಗಾಗಿಯೇ ಅದು ಒಡೆದು ಆಳುವ ನೀತಿಯನ್ನು ಜಾರಿಗೆ ತಂದಿತು ಎಂದು ಜನರಲ್ ಸಿಂಗ್ ಹೇಳಿದರು.