ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಕುರಿತ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ವಿಚಾರವಾಗಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿ ಕೇವಲ ಆರಂಭವಾಗಿದ್ದು, ಇತರ ರಾಜ್ಯಗಳೂ ಸುಗ್ರೀವಾಜ್ಞೆ ದಾಳಿಯನ್ನು ಎದುರಿಸಲಿವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಸುಗ್ರೀವಾಜ್ಞೆ ಖಂಡಿಸಿ ಆಯೋಜಿಸಿದ್ದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಸುಗ್ರೀವಾಜ್ಞೆ ರಾಷ್ಟ್ರ ರಾಜಧಾನಿಯ ಜನತೆಗೆ ಮಾಡಿದ ಅವಮಾನ. ನನಗೆ ಆಂತರಿಕ ಮಾಹಿತಿ ಸಿಕ್ಕಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಮೊದಲ ದಾಳಿಯಾಗಿದೆ. ಅಂತಹ ಸುಗ್ರೀವಾಜ್ಞೆಯನ್ನು ಇತರ ರಾಜ್ಯಗಳಲ್ಲಿಯೂ ತರಲಾಗುತ್ತದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ದೇಶದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಿಲ್ಲ. ಆದರೆ, ಅವರು ಪ್ರತಿದಿನ ದೆಹಲಿಯಲ್ಲಿ ನಡೆಯುತ್ತಿರುವ ಕೆಲಸವನ್ನು ನಿಲ್ಲಿಸುವ ಪ್ರಯತ್ನಿಸುತ್ತಿದ್ದಾರೆ. ದೆಹಲಿಯ ಜನತೆ 2014ರಲ್ಲಿ ಮೋದಿ ಅವರಿಗೆ (ಬಿಜೆಪಿ) ಏಳು ಸ್ಥಾನಗಳನ್ನು ನೀಡಿದರು. 2015ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿಗೆ 70 ಪೈಕಿ 67 ಸ್ಥಾನಗಳನ್ನು ಕೊಟ್ಟರು. ನಂತರದಲ್ಲೂ ದೇಶವನ್ನು ನೋಡಿಕೊಳ್ಳಲು ಎಲ್ಲ ಏಳು ಲೋಕಸಭಾ ಸ್ಥಾನಗಳನ್ನು ಅವರಿಗೆ ನೀಡಲಾಯಿತು. ದೆಹಲಿಯನ್ನು ನೋಡಿಕೊಳ್ಳಲು ಎಎಪಿಗೆ 62 ಸ್ಥಾನಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಸುಪ್ರೀಂಕೋರ್ಟ್ಗೆ ಕೇಂದ್ರ ಅಪಮಾನ ಮಾಡಿದೆ... ಸುಗ್ರೀವಾಜ್ಞೆ ಪ್ರಶ್ನಿಸಿ ಅರ್ಜಿ ಸಲ್ಲಿಸುತ್ತೇವೆ: ಕೇಜ್ರಿವಾಲ್
ಮೋದಿ 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ 12 ವರ್ಷಗಳ ಕಾಲ ಇದ್ದರು. ನಂತರ 2014ರಲ್ಲಿ ಪ್ರಧಾನಿಯಾಗಿ 9 ವರ್ಷಗಳಿಂದ ಆಡಳಿತ ನಡೆಸುತ್ತಿದ್ದಾರೆ. ನಾನು ದೆಹಲಿ ಸಿಎಂ ಆಗಿ ಎಂಟು ವರ್ಷಗಳಾಗಿವೆ. ಅವರು 21 ವರ್ಷಗಳಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆಯೇ ಅಥವಾ ಎಂಟು ವರ್ಷಗಳಲ್ಲಿ ನಾನು ಮಾಡಿದ್ದೇನೆಯೇ ಎಂಬುವುದನ್ನು ನೋಡಲಿ ಕೇಜ್ರಿವಾಲ್ ಸವಾಲು ಹಾಕಿದರು. ಅಲ್ಲದೇ. ನೀವು ಮತ ಹಾಕಿದ ಕಳುಹಿಸಿದ ಏಳು ಸಂಸದರು ಎಲ್ಲಿದ್ದಾರೆ?, ಅವರು ಬಿಜೆಪಿಯ ಗುಲಾಮರು. ನಿಮ್ಮ ಮಗ ಕೇಜ್ರಿವಾಲ್ ನಿಮ್ಮೊಂದಿಗೆ ನಿಲ್ಲುತ್ತಾರೆ ಎಂದು ಜನತೆಗೆ ಹೇಳಿದರು.
ಕೇಜ್ರಿವಾಲ್ ಶಾಲೆ ನಿರ್ಮಾನಿಸುತ್ತಿದ್ದರೆ, ನೀವೇನು (ಮೋದಿ) ಮಾಡಿದ್ದೀರಿ ಎಂದು ಈಗ ಜನರು ಕೇಳಲು ಪ್ರಾರಂಭಿಸಿದ್ದಾರೆ. ಇದಕ್ಕೆ ಅವರಲ್ಲಿ ಉತ್ತರವಿಲ್ಲ. ಅಲ್ಲದೇ, ಜನತೆ ಕೇಜ್ರಿವಾಲ್ ಕೆಲಸ ಮಾಡಿದ್ದಾರೆ, ನೀವೇನು ಮಾಡಿದ್ದೀರಿ ಎಂದು ಕೇಳಲು ಪ್ರಾರಂಭಿಸಿದ್ದಾರೆ. ಆದ್ದರಿಂದ ಅವರು ನಮ್ಮನ್ನೂ ಕೆಲಸ ಮಾಡದಂತೆ ತಡೆಯಲು ಪ್ರಾರಂಭಿಸಿದ್ದಾರೆ. ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರನ್ನು ಜೈಲಿಗೆ ಹಾಕಿದ್ದಾರೆ. ನಮ್ಮಲ್ಲಿ ಒಬ್ಬ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಇಲ್ಲ, ನೂರಾರು ಮಂದಿ ಇಂತಹ ನಾಯಕರಿದ್ದಾರೆ ಎಂದು ಕೇಜ್ರಿವಾಲ್ ಗುಡುಗಿದರು.
ಸಮಾವೇಶ ಉದ್ದೇಶಿಸಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ಕೂಡ ಮಾತನಾಡಿ, ಒಗ್ಗೂಡಿ ಪ್ರಧಾನಿ ಮೋದಿ ವಿರುದ್ಧ ಹೋರಾಡುವ ಸಮಯ ಬಂದಿದೆ. ಮುಂದಿನ ದಿನಗಳಲ್ಲಿ ವಿವಿಧ ಸ್ಥಳಗಳಿಗೆ ತೆರಳಿ ಜನರಿಗೆ ಹೋರಾಟ ಮಾಡುವ ಸಮಯ ಬಂದಿದೆ ಎಂದು ಹೇಳುವುದು ನನ್ನ ಉದ್ದೇಶವಾಗಿದೆ ಎಂದು ಹೇಳಿದರು.
ಬಿಜೆಪಿ ಪೋಸ್ಟರ್ ದಾಳಿ: ಮತ್ತೊಂದೆಡೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪೋಸ್ಟರ್ ದಾಳಿಯನ್ನು ಪ್ರಾರಂಭಿಸಿದೆ. ತಮ್ಮ ನಿವಾಸದ ನವೀಕರಣದ ವಿಷಯವಾಗಿ ಕೇಜ್ರಿವಾಲ್ ವಿರುದ್ಧ ಕಿಡಿಕಾರಿರುವ ಬಿಜೆಪಿ, 'ಸಿರ್ಫ್ ಏಕ್ ಬಂದಾ ಕಾಫಿ ಹೈ' ಚಿತ್ರದ ಪೋಸ್ಟರ್‌ನೊಂದಿಗೆ ಟ್ವೀಟ್ ಮಾಡಿದೆ. ದೆಹಲಿಯನ್ನು ನಾಶಮಾಡಲು ಒಬ್ಬನೇ ವ್ಯಕ್ತಿ ಸಾಕು. ಹೆಸರು ಕೇಜ್ರಿವಾಲ್ ಎಂದು ಬಿಜೆಪಿ ಹಿಂದಿಯಲ್ಲಿ ಟ್ವೀಟ್ ಮಾಡಿದೆ. ಅಲ್ಲದೇ,"ನಾವು ಕೂಡ 45 ಕೋಟಿ ರೂಪಾಯಿ ಮೌಲ್ಯದ ಎಎಪಿಯ ಅರಮನೆಯನ್ನು ನೋಡಲು ಬಯಸುತ್ತೇವೆ ಎಂದು ದೆಹಲಿಯ ರಸ್ತೆಗಳಲ್ಲಿ ಹಲವಾರು ಪೋಸ್ಟರ್‌ಗಳನ್ನು ಬಿಜೆಪಿ ಅಂಟಿಸಿದೆ.
ಇದನ್ನೂ ಓದಿ:ದೆಹಲಿಯ ಸುಗ್ರೀವಾಜ್ಞೆ ಅಂಗೀಕರಿಸಲು ಬಿಜೆಪಿ ವಿಫಲವಾದರೆ, ಅದೇ ದೇಶಕ್ಕೆ ಸಂದೇಶ: ಪವಾರ್ ಭೇಟಿ ಬಳಿಕ ಕೇಜ್ರಿವಾಲ್ ಹೇಳಿಕೆ