ನವದೆಹಲಿ: ವಿವಾದಿತ ದೆಹಲಿ ಅಬಕಾರಿ ನೀತಿ ಮದ್ಯ ಹಗರಣದಲ್ಲಿ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ ನಾಯಕ, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
"338 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನಾವು ಜಾಮೀನು ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ" ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್ ಭಟ್ಟಿ ಅವರನ್ನೊಳಗೊಂಡ ಪೀಠ ಹೇಳಿದೆ. ಅಕ್ಟೋಬರ್ 17 ರಂದು ಸುಪ್ರೀಂ ಕೋರ್ಟ್ ಸಿಸೋಡಿಯಾ ಅವರ ಜಾಮೀನು ಅರ್ಜಿಗಳ ಆದೇಶವನ್ನು ಕಾಯ್ದಿರಿಸಿತ್ತು.
ಪ್ರಕರಣದ ತನಿಖೆಯನ್ನು ಮುಂದಿನ 6 - 8 ತಿಂಗಳ ಒಳಗಾಗಿ ಮುಗಿಸುವಂತೆ ಹಾಗೂ ಅದರ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ತನಿಖಾ ಸಂಸ್ಥೆಗೆ ಸೂಚಿಸಿದೆ. ಅಬಕಾರಿ ನೀತಿ ಜಾರಿಗೆ ಸಂಬಂಧಿಸಿದಂತೆ 338 ಕೋಟಿ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆ ಆಗಿರುವುದು ಕಂಡು ಬಂದಿದ್ದು, ಮುಂದಿನ 6 ರಿಂದ 8 ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸದಿದ್ದರೆ ಸಿಸೋಡಿಯಾ ಆ ನಂತರ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ:ದೆಹಲಿ ಮದ್ಯ ನೀತಿ ಹಗರಣದಲ್ಲಿ ಆಪ್ಅನ್ನು 'ಆರೋಪಿ'ಯನ್ನಾಗಿ ಮಾಡುವಂತೆ ಕೇಳಿತ್ತಾ ಸುಪ್ರೀಂ ಕೋರ್ಟ್?.. ಸ್ಪಷ್ಟನೆ ಹೀಗಿದೆ..
ವಿಚಾರಣೆ ಸಮಯದಲ್ಲಿ ಸಿಸೋಡಿಯಾ ಪರವಾಗಿ ಹಿರಿಯ ವಕೀಲ ಅಭಿಷೇಜ್ ಮನು ಸಿಂಘ್ವಿ ಮಾತನಾಡಿದ್ದರು. ತಮ್ಮ ಕಕ್ಷಿದಾರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಸಿಬಿಐ ಪೂರ್ವಾಪೇಕ್ಷಿತ ದೂರು ದಾಖಲಿಸಿದೆ. ಅಪರಾಧದಲ್ಲಿ ಸಿಸೋಡಿಯಾ ಲಂಚ ಪಡೆದಿರುವ ಬಗ್ಗೆ ಸಾಕ್ಷ್ಯಗಳು ಹಾಗೂ ದಾಖಲೆಗಳಿಲ್ಲ ಎಂದು ಪ್ರತಿಪಾದಿಸಿದ್ದರು. ಹೀಗಾಗಿ ಅವರಿಗೆ ಜಾಮೀನು ನೀಡಬೇಕು ಎಂದೂ ಕೋರಿದ್ದರು.
ಸಿಸೋಡಿಯಾ ಜೈಲು ಸೇರಿ 8 ತಿಂಗಳು: ದೆಹಲಿ ಮಾಜಿ ಡಿಸಿಎಂ ಆಗಿರುವ ಮನೀಶ್ ಸಿಸೋಡಿಯಾ ಜೈಲು ಸೇರಿ 8 ತಿಂಗಳುಗಳು ಕಳೆದಿದೆ. ಕಳೆದ ಫೆಬ್ರವರಿ 26ರಂದು ವಿಚಾರಣೆಯ ನಂತರ ಸಿಸೋಡಿಯಾ ಅವರನ್ನು ಮೊದಲ ಬಾರಿಗೆ ಸಿಬಿಐ ಬಂಧಿಸಿತ್ತು. ಬಳಿಕ ಮಾರ್ಚ್ 9 ರಿಂದ ಮದ್ಯದ ಹಗರಣದಲ್ಲಿ ಇಡಿ ನ್ಯಾಯಾಂಗ ಬಂಧನದಲ್ಲಿ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಇದರೊಂದಿಗೆ ಇಡಿ ಮತ್ತು ಸಿಬಿಐನಿಂದ ಪ್ರತ್ಯೇಕ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ, ಸಿಸೋಡಿಯಾ ಜಾಮೀನಿಗಾಗಿ ಕೆಳ ನ್ಯಾಯಾಲಯಗಳಿಂದ ಹಿಡಿದು ದೆಹಲಿ ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಕೆಳ ನ್ಯಾಯಾಲಯ ಮತ್ತು ಹೈಕೋರ್ಟ್‌ನಿಂದ ಸಿಸೋಡಿಯಾ ಅವರಿಗೆ ನಿರಾಸೆ ಮಾತ್ರ ಸಿಕ್ಕಿದೆ. ಇದೀಗ ಸುಪ್ರೀಂ ಕೋರ್ಟ್ ಕೂಡ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನೀಡಲು ನಿರಾಕರಿಸಿದೆ.
ಇದನ್ನೂ ಓದಿ:ಮದ್ಯ ಹಗರಣ: ಮನೀಶ್ ಸಿಸೋಡಿಯಾ ಇತರರ 52 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ